ಲೇಖನ
– ಮಲ್ಲಪ್ಪ ಖೊದ್ನಾಪೂರ(ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಪರ್ಶಿಯಾದ ಒಂದು ಗಾದೆಯಂತೆ “ ಚಿಕ್ಕದು ಎನ್ನುವ ಕೆಲಸಗಳನ್ನು ಈಗಲೇ ಚೆನ್ನಾಗಿ ಮಾಡು. ಆಗ ದೊಡ್ಡ ಕೆಲಸ-ಕಾರ್ಯಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ” ಎಂಬ ಉಲ್ಲೇಖವಿದೆ. ಅದನ್ನೇ ೧೨ ನೇಯ ಶತಮಾನದಲ್ಲಿ ಬಸವಣ್ಣವರು “ಕಾಯಕವೇ ಕೈಲಾಸ” “ಕೈ ಕೆಸರಾದರೆ ಬಾಯಿ ಮೊಸರು” ಎಂದು ಹೇಳಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತುತ್ತಿನ ಚೀಲ ತುಂಬಿಕೊಳ್ಳಲು ಮತ್ತು ಜೀವನ ನಿರ್ವಹಣೆಗಾಗಿ ದುಡಿಮೆ ಮಾಡಲೇಬೇಕು. ಹಾಗೆಂದ ಮಾತ್ರಕ್ಕೆ ಬೇಕಾ ಬಿಟ್ಟಿಯಾಗಿ ಅಥವಾ ಮನಸ್ಸಿಲ್ಲದೆ, ಉದಾಸೀನತೆಯಿಂದ ಕೆಲಸ ಮಾಡುವುದು ಸರಿಯಲ್ಲ. ನಾವು ಮಾಡುವ ಪ್ರತಿ ಕೆಲಸ-ಕಾರ್ಯವು ಯಾವುದೇ ಆಗಿರಬಹುದು. ಅದನ್ನು ಸರಿಯಾಗಿ ಶ್ರದ್ಧೆ, ನಿಷ್ಠೆ, ಕಾರ್ಯತತ್ಪರತೆ, ಕಾರ್ಯದಕ್ಷತೆ ಹಾಗೂ ಮನಸ್ಸಿಗೆ ತೃಪ್ತಿದಾಯಕವಾಗಿ ಹಾಗೂ ಎಷ್ಟು ಚೆನ್ನಾಗಿ ಮಾಡುತ್ತೇವೆ ಎನ್ನುವದು ಅತಿ ಮುಖ್ಯವಾಗಿದೆ. ನಾವು ಎಂತಹ ಜೀವನ ನಡೆಸುತ್ತೇವೆಂಬುದನ್ನು ನಮ್ಮ ಕೆಲಸವೇ ತಿಳಿಸುತ್ತದೆ. ಆದ್ದರಿಂದ ನಾವು ಮಾಡುವ ಕೆಲಸ ಚಿಕ್ಕದು, ದೊಡ್ಡದು ಅಥವಾ ಯಾವುದೇ ಕೆಲಸವಾಗಿರಲಿ ಅದನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸಬೇಕಾಗಿರುವದು ಇಂದಿನ ಅಗತ್ಯತೆವಾಗಿದೆ.
ಜೇನು ಹುಳು ಸವಿಜೇನಿನ ಸಂಗ್ರಹಕ್ಕಾಗಿ ಹೇಗೆ ಯಾವ ರೀತಿಯಿಂದ ದಿನವಿಡೀ ದುಡಿಯುತ್ತದೋ ಹಾಗೆಯೇ ನಾವೆಲ್ಲ ಜೀವನದ ಸಫಲತೆಗಾಗಿ ದುಡಿಮೆ ಮಾಡಬೇಕು. ನಾವು ಯಾವುದೇ ಕೆಲಸವನ್ನು ಮಾಡಬೇಕಾದರೂ ಅದರ ಬಗ್ಗೆ ಕರ್ತವ್ಯ ನಿಷ್ಠೆ. ಪ್ರಾಮಾಣಿಕ ಪ್ರಯತ್ನ, ಶಿಸ್ತು, ಸಮಯ ಪ್ರಜ್ಷೆ ಇರಬೇಕು. ಆ ಕೆಲಸದ ನಿರ್ವಹಣೆ ಹಾಗೂ ಪೂರ್ಣಗೊಳಿಸುವಿಕೆಯಲ್ಲಿ ನಾವು ನಮ್ಮ ಹೃದಯ ಹಾಗೂ ಮನಸ್ಸನ್ನು ಕೇಂದ್ರಿಕರಿಸಬೇಕು ಅಂದಾಗ ಮಾತ್ರ ದುಡಿಮೆಯೇ ದುಡ್ಡಿನ ತಾಯಿಯಾಗುತ್ತದೆ. ಹೀಗೆ ಶ್ರೇಷ್ಠ ಸಾಧಕರ ಹಿತನುಡಿಗಳು, ವಚನಾಮೃತಗಳು ದುಡಿಮೆಯ ಹಿರಿಮೆಯನ್ನು ಸೂಚಿಸುವುದಲ್ಲದೆ ನಮ್ಮ ಜೀವನದ ಯಶಸ್ಸಿಗೆ ದಾರಿದೀಪವಾಗಿವೆ.

ಕಾರ್ಯಸಾಧನೆಗೆ ಬೇಕಾದ ಯಶೋಮಾರ್ಗಗಳು
ಗುರಿ ಸಾಧನೆಯತ್ತ ಲಕ್ಷ್ಯ ವಹಿಸಿ
ಜೀವನದಲ್ಲಿ ಮುಂದೊಂದು ಗುರಿ, ಹಿಂದೊಬ್ಬ ಗುರು ಇರಬೇಕು. ನಾವು ಹಾಕಿಕೊಂಡ ಗುರಿ ಹಾಗೂ ಕಂಡ ಕನಸು ನನಸಾಗುವವರೆಗೂ ಅಥವಾ ಕಾರ್ಯಸಿದ್ಧಿಯಾಗುವವರೆಗೂ ವಿರಮಿಸದೇ ನಿರಂತರ ಅಧ್ಯಯನ, ಸತತ ಪ್ರಯತ್ನ, ಕಠಿಣ ಪರಿಶ್ರಮ, ದೃಢ ನಿರ್ಧಾರ ಮತ್ತು ಆತ್ಮಸ್ಠೈರ್ಯದೊಂದಿಗೆ ಹೋರಾಡಿದರೆ ಗೆಲುವೆಂಬುದು ನಮಗೆ ಸಾಧ್ಯವಾಗುತ್ತದೆ.
ಚಿಂತನಾಶೀಲ ಕಾರ್ಯಪ್ರವೃತ್ತರಾಗಿ
ಲಿಯೋ ಟಾಲ್‌ಸ್ಟಾಯ್ ಅವರು “ ಒಳ್ಳೆಯ ಕೆಲಸ ಆರಂಭಿಸಲು ಎಲ್ಲ ಸಮಯವು ಶುಭಪ್ರದ. ವಿಳಂಬ, ಆಲಸ್ಯವೇ ಅಶುಭ” ಎಂದು ಹೇಳಿದ್ದಾರೆ. ಆದ್ದರಿಂದ ನಾವು ಮಾಡುವ ಪ್ರತಿಯೊಂದು ಕೆಲಸವು ನಮಗೆ ಆಸಕ್ತಿ, ಮಹತ್ವಾಕಾಂಕ್ಷೆ, ಅಭಿರುಚಿ, ಮಾಡಬೇಕೆಂಬ ಹಂಬಲ, ತವಕ ಇರಬೇಕು. ನ್ಯಾಯಯುತವಾದ ಗೆಲುವಿಗೆ ಬೇಕಾದ ಚಿಂತನೆ-ಮಂಥನ, ಆತ್ಮಾವಲೋಕನ, ತಪ್ಪಿನ ಅರಿವು, ಕಲಿತ ಪಾಠ-ಅನುಭವ, ಆತ್ಮ,ವಿಮರ್ಶೆ, ಗಾಂಭೀರ್ಯತೆ, ಆಲೋಚನೆ ಹಾಗೂ ಸಕಾರಾತ್ಮಕ ಮನೋಭಾವದೊಂದಿಗೆ ನೈಜವಾಗಿ ಕಾರ್ಯಪ್ರವೃತ್ತರಾದಾಗ ಮಾತ್ರ ಜಯ ದೊರೆಯುತ್ತದೆ.
ಕಾರ್ಯದಲ್ಲಿ ಶ್ರದ್ಧೆ ಹಾಗೂ ಪ್ರಾಮಾಣಿಕ ಪ್ರಯತ್ನ ಅಗತ್ಯ
ನಾವು ಯಾವುದೇ ಕೆಲಸ-ಕಾರ್ಯಗಳನ್ನು ಕೈಕೊಳ್ಳಲಿ, ಕಾರ್ಮಿಕನಂತೆ ಕೆಲಸ ಮಾಡಬೇಕು, ವೇದಾಂತಿಯಂತೆ ಚಿಂತಿಸಬೇಕು. ಕಾರ್ಯದಿಂದ ಆಗುವಂತಹ ಪ್ರತಿಯೊಂದು ಒಳ್ಳೆಯ ಅಂಶ, ಕಲಿತ ಪಾಠ, ಸೋಲಿನ ಅನುಭವವನ್ನು ಗುರುತಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ವಾಣಿಯಂತೆ, “ಶ್ರದ್ಧೆ, ಸಹನೆ ಮತ್ತು ಸತತ ಪ್ರಯತ್ನ ಜಯಶಾಲಿಯಾಗಲು ಬೇಕಾದ ಮೂರು ಸಾಧನಗಳು ಇದರ ಜೊತೆಗೆ ಆತ್ಮವಿಶ್ವಾಸವಿದ್ದರೆ ಮಾತ್ರ ವಿಜಯಲಕ್ಷ್ಮಿ ಒಲಿಯುತ್ತಾಳೆ” ಎಂದು ಹೇಳಿದ್ದಾರೆ. ಕೆಲಸದ ನೆರವೇರಿಕೆಯಲ್ಲಾಗುವ ವಿಳಂಬ, ವೈಫಲ್ಯ, ಹತಾಶೆ, ಸೋಲುಗಳಿಗೆ ಅಂಜದೆ, ಅಳುಕದೆ, ತಾಳ್ಮೆ ಕಳೆದುಕೊಳ್ಳದೇ ಶಾಂತ ರೀತಿಯಿಂದ ಕಾರ್ಯದಲ್ಲಿ ತೊಡಗಿಕೊಂಡಾಗ ಜಯಶೀಲನಾಗುವದರಲ್ಲಿ ಎರಡು ಮಾತಿಲ್ಲ.
ಹೋರಾಟದ ಮಧ್ಯದಲ್ಲಿ ಕೈ ಚೆಲ್ಲಿ ಕುಳಿತುಕೊಳ್ಳಬೇಡಿ
ಖ್ಯಾತ್ ಆಂಗ್ಲಭಾಷಾ ಸಾಹಿತಿ ರಾಬರ್ಟ ಫ್ರೋಸ್ಟ ಅವರು “ ಸೋತೆ ಎಂದು ನೀ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಬೇಡ. ಯಾರಿಗೆ ಗೊತ್ತು ಆ ಹೆಜ್ಜೆ ನಿನ್ನ ಇತಿಹಾಸವನ್ನೇ ಸೃಷ್ಟಿಸುವ ಹೆಜ್ಜೆಯಾಗಿರಬಹುದು” ಎಂದು ಹೇಳಿದ್ದಾರೆ. ಕೆಲವು ಸಲ ನಾವು ನಮ್ಮ ಶಕ್ತಿ ಮೀರಿ ಪ್ರಯತ್ನಪಡುತ್ತೇವೆ. ಕಾರ್ಯವನ್ನು ಮಾಡುವಾಗ ಅನೇಕ ಎಡರು-ತೊಡರು, ತೊಂದರೆ, ಸಮಸ್ಯೆಗಳು, ಕಠಿಣ ಸಂದರ್ಭಗಳು ಎದುರಾಗಬಹುದು. ಅವು ನಮನ್ನು ಸತ್ವಪರೀಕ್ಷೆಗೆ ಒಳಪಡಿಸುತ್ತೇವೆ ಪರೀಕ್ಷಿಸುತ್ತವೆ. ಹೀಗೆ ಸವಾಲುಗಳಾಗಿ ಎದುರಾಗುವ ಯಾವುದೇ ಪರಿಸ್ಥಿತಿ, ಸಂದಿಗ್ಧ ಪ್ರಸಂಗ, ಸಮಸ್ಯೆ, ಸಂಕಟಗಳಿಗೆ ಎದೆಗುದಂದೆ, ಧೈರ್ಯಶಾಲಿಯಾಗಿ ಅವುಗಳನ್ನು ಮೆಟ್ಟಿ ನಿಲ್ಲಬೇಕು. ಇನ್ನೇನು ಎರಡು ಹೆಜ್ಜೆ ಮುಂದೆ ನಡೆದರೆ ಜಯ ಸಾಧಿಸುತ್ತೇವೆ. ಅಥವಾ ಕಾರ್ಯ ಸಾಧಿಸುತ್ತೇವೆ ಅಂದುಕೊಂಡಿರುತ್ತೇವೆ. ಆವಾಗ ಕೈ ಚೆಲ್ಲಿ ಕೂಡದೇ ಮತ್ತಷ್ಟು ಇನ್ನಷ್ಟು ಹೋರಾಡಿ ಗೆಲುವೆಂಬುದು ತನ್ನಿಂದ ತಾನೆ ನಿಮ್ಮನ್ನು ಅಪ್ಪಿಕೊಳ್ಳುತ್ತದೆ.
ಸಮಯ ಪ್ರಜ್ಞೆ ಇರಲೇಬೇಕು

ಈಗ ಸಮಯ ಸರಿಯಾಗಿಲ್ಲ, ಸಾಧನೆಯ ಹಿಂದೆ ನಿರ್ಧಿಷ್ಟ ಸಮಯವೆಂಬುದು ಇರುತ್ತದೆ. ಆ ಕಾರ್ಯವನ್ನು ಸಮಯದ ಒಳಗೆ ಪೂರ್ಣಗೊಳಿಸಬಲ್ಲೇನೆಂಬ ಆತ್ಮಬಲವೊಂದಿದ್ದರೆ ಎಂತಹ ಕಾರ್ಯವನ್ನು ಯಶಸ್ಸಿತ್ತ ಕೊಂಡೊಯ್ಯಬಹುದು. ಮಹತ್ವಾಕಾಂಕ್ಷೆ, ಅಭಿರುಚಿ, ಮನೋಭಿಲಾಷೆ, ಇಲ್ಲದೆ ಯಾವುದೇ ಮಹಾನ್ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಆದರೆ ದುರ್ದೈವದ ಸಂಗತಿಯೆಂದರೆ ಇಂದು ಬಹಳಷ್ಟು ಜನರು ಕೆಲಸದಲ್ಲಿ ಉತ್ಸಾಹ, ಸಮಯ ಪ್ರಜ್ಞೆ ಮತ್ತು ಶಿಸ್ತಿನ ಕೊರತೆ ಎದ್ದು ಕಾಣುತ್ತದೆ. ಆಲಸ್ಯ ಮನೋಭಾವನೆಯನ್ನು ಹೊಡೆದೋಡಿಸಿ ಕಾರ್ಯ ಸಾಧನೆಯ ಬಗ್ಗೆ ಮಹಾನ್ ಚಿಂತನೆಗಳನ್ನು ಬೆಳೆಸಿ ಕಾರ್ಯರೂಪಕ್ಕೆ ತನ್ನಿ. ನಿಮ್ಮ ಪ್ರಾಮಾಣಿಕ ಪ್ರಯತ್ನ, ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಿದರೆ ಅವುಗಳೇ ನಿಮಗೆ ಯಶಸ್ಸಿಗೆ ಮಾರ್ಗದರ್ಶಿಯಾಗುತ್ತವೆ.
ಕೆಲಸದಲ್ಲಿ ಸಣ್ಣದು ಅಥವಾ ದೊಡ್ಡದೆಂಬುದಿಲ್ಲ
ನಾವು ಮಾಡುವ ಯಾವುದೆ ಕೆಲಸದ ಕುರಿತು ಕೀಳರಿಮೆ, ಚಿಕ್ಕದು, ಸಣ್ಣದು, ಕನಿಷ್ಠ ಎಂಬಂತಹ ನಕಾರಾತ್ಮಕ ಮನೋಧೋರಣೆಯನ್ನು ತಾಳಬೇಡಿ ಮತ್ತು ಭಾವಿಸಬೇಡಿ. ಪ್ರತಿಯೊಂದು ಕಾರ್ಯಕ್ಕೂ ತನ್ನದೇ ಆದ ಗೌರವವಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಜೀವನದಲ್ಲಿ ಬರುವ ಚಿಕ್ಕ ಪುಟ್ಟ, ಅಡ್ಡಿ-ಆತಂಕ, ಸಮಸ್ಯೆ, ಕಷ್ಟಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದು ನಮ್ಮ ಬದುಕಿನ ರಸ್ತೆಯಲ್ಲಿರುವ ಸ್ಪೀಡ್ ಬ್ರೆಕರ್‌ಗಳಿದ್ದಂತೆ. ಅವುಗಳು ನಮ್ಮನ್ನು ದೊಡ್ಡ ಅನಾಹುತಗಳಿಂದ ಪಾರು ಮಾಡುತ್ತವೆ. ಆದ್ದರಿಂದ ಮಾಡುವ ಕೆಲಸ-ಕಾರ್ಯಗಳಲ್ಲಿ ಭಕ್ತಿ, ಶ್ರದ್ಧೆ, ಆಸಕ್ತಿ ಮತ್ತು ಸಕ್ರೀಯವಾಗಿ ಪಾಲ್ಗೊಂಡರೆ ಜಯ ಸಿಗುತ್ತದೆ.
ಕೊನೆಯ ನುಡಿ
ಇಂದು ಜಪಾನ್ ದೇಶವು ದುಡಿಮೆ, ಕ್ರಿಯಾಶೀಲತೆ, ಕಾರ್ಯದಕ್ಷತೆ ಮತ್ತು ಕಾರ್ಯತತ್ಪರತೆಯಂತಹ ಉದಾತ್ತವಾದ ವಿಚಾರಧಾರೆಗಳಿಂದ ಜಗತ್ತಿನಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ. ನಮ್ಮ ಜೀವನದ ನಿಜವಾದ ಬಂಡವಾಳ, ಸಂಪನ್ಮೂಲವೇ ದುಡಿಮೆ. ಅದಕ್ಕಾಗಿಯೇ ಬಸವಣ್ಣನವರು ಕಾಯಕವೇ ಕೈಲಾಸವೆಂದು ಹೇಳಿದ್ದಾರೆ. ದುಡಿಯುತ್ತಲೇ ಇರಿ. ನೀವು ಯಾವುದಾದರೊಂದು ಕೆಲಸ ಮಾಡುತ್ತಿರುವ ಸಮಯದಲ್ಲಿ ಅದರ ಮುಂದಿನ ಫಲಿತಾಂಶದ ಬಗ್ಗೆ ಚಿಂತಿಸಬೇಡಿ. ಕೈಗೊಂಡ ಕಾರ್ಯದ ಕುರಿತು ನಿರ್ಧಿಷ್ಟ ಗುರಿ, ಯೋಜನೆ, ರೂಪರೇಷೆ ಮತ್ತು ಧನಾತ್ಮಕ ಚಿಂತನೆ, ಶ್ರಮ, ಬದ್ಧತೆ, ದೃಢ ನಿರ್ಧಾರ ಮತ್ತು ಆತ್ಮವಿಶ್ವಾಸಗಳೆಂಬ ಅಷ್ಟ ಮಂತ್ರಗಳೊಂದಿಗೆ ಮುನ್ನಡೆಯಿರಿ ಯಶಸ್ಸು ಎಂಬುದು ನಿಮ್ಮ ಮನೆಯ ಕದವನ್ನು ತಟ್ಟುವದರಲ್ಲಿ ಯಾವುದೇ ಸಂದೇಹವಿಲ್ಲ.
