ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ಆಧುನಿಕತೆ, ಜೀವನ ಶೈಲಿ, ಆಹಾರ ಪದ್ಧತಿ-ಕ್ರಮ ಮತ್ತು ಊಟೋಪಚಾರದ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆಯ ಪರಿಣಾಮದಿಂದಾಗಿ ನಮ್ಮ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿವೆ. ಅದರಲ್ಲೂ ಮಕ್ಕಳು, ಯುವಕರು ಮತ್ತು ಮಹಿಳೆಯರು ನಮ್ಮ ಆಹಾರ ಪದ್ಧತಿಯನ್ನು ಬಿಟ್ಟು ಫಾಸ್ಟ ಫುಡ್, ಫಿಜ್ಜಾ, ಬರ್ಗರ್, ಡೋನಟ್, ಜಂಕ್ ಫುಡ್ ಮತ್ತು ಸಂಸ್ಕರಿತ ಆಹಾರ ಪದಾರ್ಥಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ರಕ್ತಹೀನತೆ, ಅನಿಮೀಯಾ, ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳಿಂದ ಬಳಲುತ್ತಿರುವುದು ಕಳವಳಕಾರಿ ಸಂಗತಿ ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಕಲ್ಯಾಣ ಘಟಕ, ಎನ್.ಎಸ್.ಎಸ್ ಘಟಕ ಮತ್ತು ಸ್ಪಂದನ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಡಿಯಲ್ಲಿ ಜರುಗಿದ ರಕ್ತ ತಪಾಸಣೆ ಮತ್ತು ಅನಿಮೀಯಾ ತಡೆಗಟ್ಟುವ ಅರಿವು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ವಿಶೇಷವಾಗಿ ಮಕ್ಕಳಲ್ಲಿ ಪೌಷ್ಟಿಕ ಮತ್ತು ಪೋಷಕಾಂಶಗಳ ಕೊರತೆಯಿಂದ ರಕ್ತಹೀನತೆಯಂತಹ ತೊಂದರೆಗಳು ಉಂಟಾಗಿ ಆರೋಗ್ಯದಲ್ಲಿ ಸಮಸ್ಯೆಯಾಗುತ್ತಿದೆ. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಹಾಲು, ತರಕಾರಿ, ಕಾಳು-ಧಾನ್ಯ ಮತ್ತು ಪೌಷ್ಟಿಕ ಆಹಾರ ಪದ್ಧತಿಯನ್ನಾಗಿಸಿ ರೂಢಿಸಿಕೊಳ್ಳಬೇಕು. ಆರೋಗ್ಯವೇ ಭಾಗ್ಯ ಎಂಬಂತೆ ಎಲ್ಲ ಸಂಪತ್ತುಗಳಲ್ಲಿ ಆರೋಗ್ಯವೇ ಪ್ರಮುಖವಾಗಿದ್ದು, ಜಂಕ್ ಪುಡ್ ಸಂಸ್ಕೃತಿ ಬಿಟ್ಟು ಸುಸ್ಥಿರ ಆರೋಗ್ಯಕ್ಕಾಗಿ ನಮ್ಮ ಮೂಲ ಪೂರ್ವಜರ ಆಹಾರ ಪದ್ಧತಿಯನ್ನು ಅನುಸರಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ವಿಶಾಲಾಕ್ಷಿ ಹೊನ್ನಾಕಟ್ಟಿ, ಎನ್.ಎಸ್.ಎಸ್. ಘಟಕದ ಸಂಯೋಜಕ ಪ್ರೊ. ಸುನೀಲಕುಮಾರ ತೋಂಟಾಪೂರ, ಡಾ. ಚಂದ್ರಕಾಂತ.ಬಿ., ಪ್ರೊ. ಸಂಗಮೇಶ ಗುರವ, ಪ್ರೊ. ಸಿದ್ರಾಮ ಯರನಾಳ, ಸ್ಪಂದನ ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇನ್ನಿತರರು ಸಹ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸುಮಾರು ೨೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಿಮೋಗ್ಲೋಬಿನ್ ರಕ್ತ ತಪಾಸಣೆ ನಡೆಸಿ, ರಕ್ತಹೀನತೆಯನ್ನು ತಡೆಗಟ್ಟಲು ಔಷಧೋಪಚಾರ ನೀಡಲಾಯಿತು.