ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನೆರೆ ಹಾವಳಿಯಿಂದಾಗಿ ತತ್ತರಿಸಿದ ಈ ಭಾಗಕ್ಕೆ ವಿಶೇಷ ಪ್ಯಾಕೇಜ ಬಿಡುಗಡೆ ಮಾಡಬೇಕು. ಅತಿವೃಷ್ಟಿಯಿಂದ ಹಾನಿಯಾದ ರೈತರಿಗೆ ೨೫ಸಾವಿರ ಪರಿಹಾರ ಕೊಡಬೇಕು. ಮಳೆಯಿಂದ ಬಿದ್ದ ಮನೆಗೆ ಬಿಜೆಪಿ ಸರಕಾರ ಕೊಟ್ಟಂತೆ ೫ಲಕ್ಷ ಕೊಡಬೇಕು. ಭೀಮಾ ನದಿ ಪ್ರವಾಹ ಬಾದಿತ ಗ್ರಾಮಗಳನ್ನು ಸ್ಥಳಾಂತರಿಸಿ ಶಾಶ್ವತ ವಸತಿ ಸೌಲಭ್ಯ ಒದಗಿಸಿಕೊಡಬೇಕು. ಬಸವ ವಸತಿ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು. ಬಹುವಾರ್ಷಿಕ ಬೆಳೆಗಳಿಗೆ ಎಕರೆಗೆ ೧ಲಕ್ಷ ರೂ. ನೀಡಬೇಕು. ಸಿಂದಗಿ, ಆಲಮೇಲ ತಾಲೂಕಿನ ರಸ್ತೆ-ಗುಂಡಿಗಳನ್ನು ತಕ್ಷಣದಲ್ಲಿ ಮುಚ್ಚಿಸಬೇಕು ಎಂದು ಮಾಜಿ ಶಾಸಕ ರಮೇಶ ಭೂಸನೂರ ಒತ್ತಾಯಿಸಿದರು.
ಸಿಂದಗಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ವರುಣಾರ್ಭಟದಿಂದ ಕಬ್ಬಿನ ಬೆಳೆ ಶೇ.೨೦ರಷ್ಟು ಹಾನಿಯಾದದ್ದನ್ನು ಹೊರತು ಪಡಿಸಿದರೆ ಉಳಿದೆಲ್ಲ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಕೇಂದ್ರ ಸರಕಾರ ಕಬ್ಬಿಗೆ ಎಫ್‌ಆರ್‌ಪಿ ಬೆಲೆ ನಿಗದಿಪಡಿಸಿದೆ. ಹಾಗೆಯೇ ರಾಜ್ಯ ಸರಕಾರವು ಪ್ರತಿ ಟನ್‌ಗೆ ಕಬ್ಬಿಗೆ ೪೫೦೦ ರೂ. ಘೋಷಣೆ ಮಾಡಬೇಕು. ಉಳಿದೆಲ್ಲ ಬೆಳೆ ಹಾನಿಗೆ ಗರಿಷ್ಟ ಪರಿಹಾರ ಶೀಘ್ರವೇ ಬಿಡುಗಡೆ ಮಾಡಬೇಕು ಆಗ್ರಹಿಸಿದರು. ಗೋಲಗೇರಿ ಭಾಗದ ೧೫ರಸ್ತೆಗಳಲ್ಲಿ ಒಂದೇ ಕಿಮೀ. ರಸ್ತೆಯನ್ನು ಹಾಲಿ ಶಾಸಕರ ಅವಧಿಯಲ್ಲಿ ಆಗಿದ್ದನ್ನು ಸಾಬೀತು ಪಡಿಸಿದರೆ ನಾನು ರಾಜೀನಾಮೆ ಕೊಡುತ್ತೇನೆಂದು ಸವಾಲು ಹಾಕಿದ್ದೇನೆ. ಆದರೆ ಶಾಸಕರು ಈ ಸವಾಲನ್ನು ಸ್ವೀಕರಿಸಿಲ್ಲ. ದೀಪಾವಳಿಯ ಹಬ್ಬದ ಪಟಾಕಿ ಸದ್ದು ಮುಗಿದ ನಂತರ ನನ್ನ ರಾಜಕೀಯ ಪಟಾಕಿ ಸದ್ದು ಮಾಡಲಿದೆ ಎಂದು ಹೇಳಿದರು.
ಈ ವೇಳೆ ಮಾಜಿ ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ, ಗುರು ತಳವಾರ ಮಾತನಾಡಿ, ಬಿಜೆಪಿ ರೈತ ಮೋರ್ಚಾ ಮತ್ತು ಮಂಡಲದ ವತಿಯಿಂದ ಮಾಜಿ ಶಾಸಕ ರಮೇಶ ಭುಸನೂರ ಅವರ ನೇತೃತ್ವದಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡವಂತೆ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಅ.೧೪ರಿಂದ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ೪ಗಂಟೆಗೆ ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪೀರು ಕೆರೂರ, ಗುರು ತಳವಾರ, ಅಶೋಕ ನಾರಾಯಣಪೂರ, ಪ್ರಶಾಂತ ಕದ್ದರಕಿ, ಬಂಗಾರೆಪ್ಪಗೌಡ ಬಿರಾದಾರ, ಸಿದ್ದರಾಮ ಆನಗೊಂಡ, ಮಲ್ಲಿಕಾರ್ಜುನ ಸಾವಳಸಂಗ, ಎಸ್.ಎನ್.ಹಿರೇಮಠ ಸೇರಿದಂತೆ ಇತರರು ಇದ್ದರು.