ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಂವಿಧಾನದ ಅತ್ಯಂತ ಶ್ರೇಷ್ಠ ಅಂಗಗಳಲ್ಲಿ ನ್ಯಾಯಾಂಗವು ಒಂದು. ನ್ಯಾಯಾಲಯವನ್ನು ದೇವಾಲಯವೆಂದು, ನ್ಯಾಯಾಧೀಶರನ್ನು ದೇವರೆಂದು ಪೂಜಿಸಲಾಗುತ್ತದೆ. ಇಂತಹ ಪವಿತ್ರ ಸ್ಥಾನ ಮತ್ತು ವ್ಯಕ್ತಿಯ ಮೇಲೆ ಅವಮಾನಕಾರಿಯಾಗಿ ಶೂ ಎಸೆದದ್ದು ಖಂಡನಾರ್ಹ. ಅದು ಕೇವಲ ವ್ಯಕ್ತಿಗತ ಅವಮಾನವಲ್ಲದೇ ಸಂವಿಧಾನದ ಮೇಲೆ ಮಾಡಿದ ಪ್ರಹಾರ ಎಂದು ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಆಕ್ರೋಶ ವ್ಯಕ್ತಪಡಿಸಿದರು.
ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ಘಟನೆಯನ್ನು ಖಂಡಿಸಿ ಅ.೧೬ರಂದು ವಿಜಯಪುರ ಬಂದ್ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ವಿಜಯಪುರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಸಂಘಟನೆಗಳು ಸಹಕಾರ ನೀಡಬೇಕು.
ಇದೇ ಸಂದರ್ಭದಲ್ಲಿ ದಲಿತ ಮುಖಂಡರಾದ ರವಿ ಹೋಳಿ, ಧರ್ಮಣ್ಣ ಯಂಟಮಾನ, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ತಾಲೂಕಾಧ್ಯಕ್ಷ ಸಲೀಂ ಮರ್ತೂರ ಮಾತನಾಡಿ, ಇಂತಹ ವ್ಯವಸ್ಥೆಯ ವಿರುದ್ಧ ಜ್ಯಾತ್ಯಾತೀತ, ಪಕ್ಷಾತೀತ ಪ್ರತಿಭಟನೆ ನಡೆಯದೇ ಇರುವುದು ವಿಷಾದನೀಯ. ಇದಕ್ಕೆ ಎಲ್ಲ ಪ್ರಗತಿಪರ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಒಂದುಗೂಡಿ ಇಂತಹ ಘಟನೆಗಳು ಮತ್ತೇ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.