ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಚಟುವಟಿಕೆಯ ನಿಷೇಧದ ಕುರಿತು ಇಷ್ಟೊಂದು ಬೇಜವಾಬ್ದಾರಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರೆ, ಇದು ಅವರ ಮೂರ್ಖತನದ ಪ್ರದರ್ಶನ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಇತಿಹಾಸ ಮತ್ತು ಹಿನ್ನೆಲೆ, ಅದರ ಕಾರ್ಯ ಚಟುವಟಿಕೆಯ ಮಾಹಿತಿ ಇಲ್ಲದೇ ಇದ್ದವರು ಪ್ರಚಾರದ ಗಿಳಿನಿಂದ ಇಂತಹ ಹೇಳಿಕೆ ನೀಡುತ್ತಾರೆ.
ಪ್ರಿಯಾಂಕ್ ಖರ್ಗೆ ಅವರ ಕಣ್ಣು ಸಿಎಂ ಗದ್ದುಗೆಯ ಮೇಲೆ ಇರುವಂತೆ ಗೋಚರಿಸುತ್ತದೆ. ಆದ ಕಾರಣ ಹೈಕಮಾಂಡ್ ಮತ್ತು ಗಾಂಧಿ ಕುಟುಂಬವನ್ನು ಓಲೈಸುವ ದಿಸೆಯಲ್ಲಿ ಪತ್ರ ಬರೆದಿರುವಂತೆ ಎದ್ದು ಕಾಣುತ್ತಿದೆ. ಆರ್‌ಎಸ್‌ಎಸ್ 100 ವರ್ಷ ಪೂರೈಸಿದ ಈ ಶುಭ ಘಳಿಗೆಯಲ್ಲಿ ದೇಶದಾದ್ಯಂತ ಚಟುವಟಿಕೆ, ಪಥ ಸಂಚಲನ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಖರ್ಗೆ ಪತ್ರದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೆಲ್ಲದಕ್ಕೂ ಕಾಲ ಉತ್ತರ ಕೊಡಲಿದೆ. ಸಚಿವರಾಗಿ ರಾಜ್ಯ ಸರಕಾರವನ್ನು ಮುಜುಗರಕ್ಕೆ ತರುವಂತಹ ಕಾರ್ಯ ಮಾಡದೇ ಮತ್ತು ಉಡಾಫೆಯಾಗಿ ಮಾತನಾಡುವುದು ತಮಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

