ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಾನವನ ಬದುಕಿನೊಂದಿಗೆ ಹುಟ್ಟಿಬಂದ ಆಚಾರ ವಿಚಾರಗಳೇ ಜಾನಪದ ಸಂಸ್ಕೃತಿಯಾಗಿ ಇಂದು ನಮ್ಮೆಲ್ಲರಲ್ಲಿ ಉಳಿದುಕೊಂಡಿವೆ. ಬದುಕಿಗೆ ಉತ್ತಮವಾದ ಆದರ್ಶಗಳ ಮಾರ್ಗದರ್ಶನ ಮಾಡುತ್ತ ಜನ ಮಾನಸದಲ್ಲಿ ಶ್ರೇಷ್ಠ ಸಂಸ್ಕೃತಿ ತುಂಬುತ್ತಿದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಹೇಳಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಮತ್ತು ಕೂಡಗಿ ವಲಯ ಘಟಕದ ಸಹಯೋಗದಲ್ಲಿ ಕೊಲ್ಹಾರ ತಾಲೂಕಿನ ಅರಸಣಗಿ ಗ್ರಾಮದ ಬೀರೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ ” ವಿಶ್ವ ಬುಡಕಟ್ಟು ಮತ್ತು ವಿಶ್ವ ಜಾನಪದ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಆಧುನಿಕತೆಯ ಭರಾಟೆಯಲ್ಲಿ ಮೂಲ ಜನಪದ ಸಂಸ್ಕೃತಿ ಮಂಕಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ನಾವು ಎಷ್ಟೇ ಪ್ರತಭಾವಂತರಾದರೂ ಮೂಲ ಸಂಸ್ಕೃತಿ ಮರೆಯಬಾರದು ಎಂದು ಕರೆನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಪಾರಿಜಾತ ಕಲಾವಿದ ಶಂಕರಯ್ಯ ಚಿಕ್ಕಮಠ, ಇಂದಿನ ಯುವ ಜನಾಂಗ ಜಾನಪದ ಸಂಸ್ಕೃತಿ ಎಂದರೆ ಮೂಗು ಮುರಿಯುತ್ತಿದ್ದಾರೆ. ಹಿಂದಿನ ಕಲೆ, ಸಾಹಿತ್ಯ, ಆಚಾರ, ವಿಚಾರ, ಸಂಪ್ರದಾಯ ನಮ್ಮ ಬದುಕಿಗೆ ಉತ್ತಮವಾದ ದಾರಿ ದೀಪವಾಗಿ ಬದುಕು ನಡೆಸುತ್ತಿದೆ. ಇಂದಿನ ಶಿಕ್ಷಣ ಪದ್ಧತಿ ಜನಪದ ಸಂಸ್ಕೃತಿ ಉಳಿಸುತ್ತಿಲ್ಲ ಎಂಬುದು ನೋವಿನ ಸಂಗತಿ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಸದಸ್ಯ ಕಲಾವಿದ ಮೌಲಾಸಾಹೇಬ ಜಹಾಗೀರದಾರ , ಸಂಸ್ಕೃತಿ ಉಳಿಯಬೇಕಾದರೆ ಸರಕಾರ ಕಲಾವಿದರನ್ನು , ಸಾಹಿತಿಗಳನ್ನು ಮತ್ತು ಸಂಘಟಕರನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಸಂಕಷ್ಟದಲ್ಲಿರುವ ಕಲಾವಿದರಿಗೆ ಸಹಾಯ ಮಾಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಾಕಷ್ಟು ಅನುದಾನ ನೀಡಬೇಕು. ಅಂದಾಗ ಕಲೆ ಕಲಾವಿದರು ಉಳಿಯುತ್ತಾರೆ ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ಕೂಡಗಿ ವಲಯದ ಅಧ್ಯಕ್ಷ ದುಂಡಯ್ಯ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಸಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಹಿರಿಯರಾದ ಗೂಳಪ್ಪ ಹಳ್ಳಿ , ಬಸಪ್ಪ ದಿನ್ನಿ, ನಿಂಗಪ್ಪ ತುಬಾಕಿ , ಅಖಂಡೆಪ್ಪ ತುಬಾಕಿ, ಸಂಗಪ್ಪ ಜೈನಾಪುರ, ಶರಣಪ್ಪ ಬೆಲ್ಲದ, ರಾಮನಿಂಗ ಇರಗಾರ, ಶಂಕರಪ್ಪ ತಳವಾರ, ರಾಮಣ್ಣ ಕುಂಬಾರ, ಮೈಬೂಸಾಬ ನರಿ, ಯಲ್ಲಪ್ಪಗೌಡ ಬಿರಾದಾರ ಮತ್ತು ಅಶೋಕ ಗಾಣಿಗೇರ ಉಪಸ್ಥಿತರಿದ್ದರು.
ಹಣಮಂತ ತುಬಾಕಿ ನಿರೂಪಿಸಿದರು. ವಿಠಲ ಗೂಗಿಹಾಳ ವಂದಿಸಿದರು.
ಕಾರ್ಯಕ್ರಮದಲ್ಲಿ ಅರಸಣಗಿ ಗ್ರಾಮದ ಚೌಡಕಿ ಮೇಳ, ಡೊಳ್ಳಿನ ಮೇಳ, ಸೋಬಾನಪದ, ಉಪ್ಪಲದಿನ್ನಿ ರಿವಾಯತ ಮೇಳ, ಬಳೂತಿ ಹೆಜ್ಜೆ ಮೇಳ, ಕವಲಗಿ ಸೋಬಾನ ಪದ, ಸಿದ್ದನಾಥ ಮತ್ತು ಗಣಿ ರಿವಾಯತ ಮೇಳಗಳ ಕಲಾ ಪ್ರದರ್ಶನ ನಡೆಯಿತು.

