ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಮೂಲಕ ಹರನಾಳ ಗ್ರಾಮ, ನೂರಾರು ಜಮೀನುಗಳು ಹಾಗೂ ಹಿಂದೂ, ಮುಸ್ಲಿಂ ಸಮುದಾಯಗಳ ಸ್ಮಶಾನಕ್ಕೆ ತೆರಳುವ ರಸ್ತೆ ತ್ಯಾಜ್ಯ ನೀರು ಹಾಗೂ ಕೆಸರಿನಿಂದ ತುಂಬಿ ಪ್ರಯಾಣಿಸಲು ಬಾರದಂತಾಗಿದ್ದು, ಕೂಡಲೇ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.
ಪಟ್ಟಣದ ಹಳೆಯ ಹರನಾಳ ರೋಡ್ ಎಂದೇ ಕರೆಯಲ್ಪಡುವ ರಸ್ತೆ ಈಗ ಮಳೆ ಹಾಗೂ ತ್ಯಾಜ್ಯ ನೀರಿನಿಂದ ಕೆಸರುಮಯವಾಗಿ ಬದಲಾಗಿದೆ. ಇಲ್ಲಿ ಬೈಕ್ ಸಹಿತ ದ್ವಿಚಕ್ರ ವಾಹನದಲ್ಲಿ ಚಲಿಸುವುದು ಹೋಗಲಿ ಬರಿಗಾಲಲ್ಲಿ ನಡೆಯಲು ಬಾರದಂತಾಗಿದೆ. ಸಿಂದಗಿ ರಸ್ತೆಯಲ್ಲಿನ ಬಸವಣ್ಣ ದೇವಸ್ಥಾನ ದಾಟಿ ಸ್ವಲ್ಪ ತೆರಳುವುದೇ ತಡ ತ್ಯಾಜ್ಯನೀರು ಹಾಗೂ ಕೊಳೆತ ನಿರುಪಯುಕ್ತ ವಸ್ತುಗಳಿಂದ ಬರುವ ಕೆಟ್ಟ ವಾಸನೆ ಇಡೀ ವಾತಾವರಣವನ್ನು ಕಲುಷಿತಗೊಳಿಸಿದೆ. ಇನ್ನೂ ರಸ್ತೆಯ ಎಡಬಲಗಳಲ್ಲಿ ತ್ಯಾಜ್ಯ ಸಂಗ್ರಹಗೊಂಡು ಮೂಗು ಮುಚ್ಚಿಕೊಂಡೇ ತೆರಳುವದು ಅನಿವಾರ್ಯವಾಗಿದೆ. ಇದೇ ರಸ್ತೆಯಲ್ಲಿ ಹಿಂದೂ, ಮುಸ್ಲಿಂ ಸಮುದಾಯಗಳೆರಡರ ಸ್ಮಶಾನ ಭೂಮಿಗಳಿದ್ದು ಅಂತ್ಯಕ್ರಿಯೆಗಳಿಗೆ ಬರುವ ಬೇರೆ ಗ್ರಾಮದ ಜನರು ಹಾಗೂ ಸ್ಥಳೀಯ ಸಾರ್ವಜನಿಕರು ಹಿಡಿಶಾಪ ಹಾಕುತ್ತಲೇ ತೆರಳುತ್ತಿದ್ದಾರೆ.
ಹಳೆಯ ಹರನಾಳ ರಸ್ತೆಯಲ್ಲಿ ಪಟ್ಟಣದ ನೂರಕ್ಕೂ ಹೆಚ್ಚು ರೈತರ ಜಮೀನುಗಳಿದ್ದು, ಇವರು ನಿತ್ಯ ಇದೇ ರಸ್ತೆಯಲ್ಲಿಯೇ ತೆರಳಬೇಕಾಗಿದೆ. ಈಗ ಅರ್ಧ ಸಿ.ಸಿ. ರಸ್ತೆಯಾಗಿದ್ದು, ಉಳಿದದ್ದು ಮಣ್ಣಿನಿಂದ ಕೂಡಿದ್ದು ಸಂಪೂರ್ಣ ಕೆಸರುಮಯವಾಗಿ ಪ್ರಯಾಣಕ್ಕೆ ಬಾರದಂತಾಗಿದೆ. ಆದ್ದರಿಂದ ಸ್ಥಳೀಯ ಆಡಳಿತದ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಖುದ್ದಾಗಿ ಭೇಟಿ ನೀಡಿ ಇಡೀ ರಸ್ತೆ ಹಾಗೂ ಕಲುಷಿತ ವಾತಾವರಣಕ್ಕೆ ಸೂಕ್ತ ಕ್ರಮ ಕೈಗೊಂಡು ತಾಲ್ಲೂಕು ಕೇಂದ್ರ ಸ್ಥಳದ ಘನತೆ ಕಾಪಾಡುವಂತೆ ರೈತರಾದ ಅಜೀಜ್ ಯಲಗಾರ, ಈರಣ್ಣಾ ಒಂಟೆತ್ತಿನ, ಬಸವರಾಜ ತಾಳಿಕೋಟಿ, ಶಂಕ್ರೆಪ್ಪ ಜಂಬಗಿ, ನಬಿಲಾಲ್ ಯಲಗಾರ, ಪ್ರಭು ಇಂಡಿ, ನಬಿರಸೂಲ್ ಮಣೂರ, ಆಯಾಜ್ ಯಲಗಾರ, ಮಹಮ್ಮದ್ ಹನೀಫ್ ಕಲಾಲ್, ಅಶೋಕ ಒಂಟೆತ್ತಿನ, ಶಿವು ರಾಮಗೊಂಡ ಸಹಿತ ಹಲವರು ಆಗ್ರಹಿಸಿದ್ದಾರೆ.