ಉದಯರಶ್ಮಿ ದಿನಪತ್ರಿಕೆ
ಚಡಚಣ: ದೇಶ ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮವರ ಕುತಂತ್ರದಿಂದ ನಮ್ಮ ದೇಶವನ್ನು ಬ್ರಿಟಿಷರು ಆಳಿದರು. ಅಂದು ನಮ್ಮಲ್ಲಿ ದೇಶ ಪ್ರೇಮ, ಸಂಘಟನೆಯ ಕೊರತೆ ಎದ್ದು ಕಾಣುತ್ತಿತ್ತು. ದೇಶ ಪ್ರೇಮ ದೇಶಕ್ಕೋಸ್ಕರ ಸಂಘಟನೆ ಮಾಡುವದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉದ್ದೇಶ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಹ ಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ ಹೇಳಿದರು.
ಪಟ್ಟಣದ ಸಂಗಮೇಶ್ವರ ಕಾಲೇಜು ಮೈದಾನದಲ್ಲಿ ವಿಜಯದಶಮಿ ಪಥ ಸಂಚಲನ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
ಸಂಘ ಎಂದರೆ ದೇಶಭಕ್ತಿ, ಸಂಘ ಎಂದರೆ ಸೇವೆ, ಸಂಘವೆಂದರೆ ಸಮಾಜಕ್ಕೆ ಸಂಕಟ ಬಂದಾಗ ಜೀವದ ಹಂಗು ತೊರೆದು ಸೇವೆ ಮಾಡುವದು, ಹಿಂದೂ ಸಮಾಜಕ್ಕೆ ಅಂಟಿದ ಅಸ್ಪಶೃತೆ ತೊಡೆದು ಹಾಕಲೆಂದೇ ಸಂಘ ಹುಟ್ಟಿತು. ಎಂದಿಗೂ ಜಾತಿ ಕೇಳದ ಸಂಘಟನೆಯೇ ಸಂಘ, ಭಗವಂತ ಜಾತಿ ಮಾಡಿಲ್ಲ, ಜನ್ಮದಿಂದ ನಾವೆಲ್ಲ ಶೂದ್ರರು, ಜಾತಿ ನಾವು ಮಾಡಿಕೊಂಡಿದ್ದೇವೆ. ಸಾಧನೆಯಿಂದ ದೊಡ್ಡವರಾಗಬೇಕೆ ಹೊರತು, ಜಾತಿಯಿಂದಲ್ಲ ಎಂದರು.
ಕಾರ್ಯಕ್ರಮದಲ್ಲಿ ಹಾವಿನಾಳ ಗ್ರಾಮದ ಚರಮೂರ್ತಿ ಮಠದ ವಿಜಯಮಹಾಂತೇಶ ಶಿವಾಚಾರ್ಯರು ಆಶಿರ್ವಚನ ನೀಡಿದರು.
ಕಾರ್ಯಕ್ರಮಕ್ಕಿಂತ ಮೊದಲು ಸುಮಾರು 1000ಕ್ಕೂ ಅಧಿಕ ಗಣವೇಶಧಾರಿಗಳಿಂದ ಪಥಸಂಚಲನ ನಡೆಯಿತು. ಪಥಸಂಚಲನವು ಎಪಿಎಮ್ಸಿ ಇಂದ ಪ್ರಾರಂಭಗೊಂಡು ಬಸವೇಶ್ವರ ಸರ್ಕಲ್, ಬಜಾರ ರೋಡ, ಅಗಸಿ, ಎಸ್.ಬಿ.ಐ. ಬ್ಯಾಂಕ್,ಬಸವೇಶ್ವರ ಸರ್ಕಲ್, ಸರಕಾರಿ ದವಾಖಾನೆ, ಸಿಂಪಿ ಲಿಂಗಣ್ಣ ಸರ್ಕಲ್, ಜೇಸರ ದಾಸಿಮಯ್ಯ ಸರ್ಕಲ್, ನೇಕಾರ ಕಾಲನಿ ಮಾರ್ಗವಾಗಿ ಸಂಚರಿಸಿ, ಸಂಗಮೇಶ್ವರ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಂಡಿತು.