ವಿಜಯಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಜರುಗಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೌದ್ಧಿಕ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲಜೀ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿಂದೂತ್ವ ಎಂದರೆ ಕೇವಲ ಅಭಿಮಾನವಲ್ಲ, ಅದೊಂದು ಸ್ವಾಭಿಮಾನ, ಕೇರಳ, ತಮಿಳುನಾಡಿನಲ್ಲಿಯೂ ಹಿಂದೂತ್ವ ವಾತಾವರಣ ಬೆಳೆಯುತ್ತಿದೆ, ಹಿಂದೂತ್ವ ಭಾವ ಜಾಗೃತವಾಗುತ್ತಿದೆ, ಕಾಶ್ಮೀರದಲ್ಲಿ ಹಿಂದೂ ಗುರುಕುಲಗಳು ಆರಂಭವಾಗುತ್ತಿವೆ ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲಜೀ ಹೇಳಿದರು.
ವಿಜಯಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ವಿಜಯದಶಮಿ ಹಾಗೂ ಸಂಘ ಪರಿವಾರದ ೧೦೦ ವಸಂತ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೌದ್ಧಿಕ ಕಾರ್ಯಕ್ರಮದಲ್ಲಿ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಿದ ಅವರು, ತಮಿಳುನಾಡು, ಕೇರಳದಲ್ಲಿ ರಾಮನ ಪ್ರತಿಮೆಗಳಿಗೆ ಅವಮಾನ ಮಾಡಲಾಗುತ್ತಿತ್ತು, ಆದರೆ ಅಲ್ಲಿಯೂ ಹಿಂದೂತ್ವದ ಭಾವನೆ ಜಾಗೃತಗೊಂಡಿದೆ. ಇದಕ್ಕೆ ಸಂಘ ಪರಿವಾರದ ಶ್ರಮವೇ ಕಾರಣ ಎಂದರು.
ಕಾಶ್ಮೀರದಲ್ಲಿ ಅಂದು ಇದ್ದ ಪರಿಸ್ಥಿತಿಯಿಂದ ಹಿಂದೂಗಳು ಪಲಾಯನ ಮಾಡಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಸೃಜನೆಯಾಗಿತ್ತು, ಆದರೆ ಈಗ ಹಿಂದೂಗಳು ಪಲಾನಯವಾದಿಗಳಲ್ಲ ಬದಲಿಗೆ ಪರಾಕ್ರಮಿಗಳು, ಈಗ ಕಾಶ್ಮೀರದಲ್ಲಿ ವಾತಾವರಣ ಬದಲಾಗಿದೆ, ಎಷ್ಟೋ ಹಿಂದೂಗಳು ಮರಳಿ ತಮ್ಮ ನೆಲ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದಾರೆ, ಹಿಂದೂ ಹೋಟೆಲ್‌ಗಳು ಆರಂಭವಾಗುತ್ತಿವೆ, ಹಿಂದೂ ಗುರುಕುಲಗಳು ವಿದ್ಯಾರ್ಜನೆಗೆ ಸಜ್ಜಾಗಿ ನಿಂತಿವೆ ಎಂದರು.
ಗಾಂಧೀಜಿ ಅವರಲ್ಲಿಯೂ ಹಿಂದೂತ್ವ ಭಾವನೆ ಕೊರತೆ ಇರಲಿಲ್ಲ, ಆದರೂ ಅವರು ಹಿಂದೂಗಳನ್ನು ಶಕ್ತಿಶಾಲಿಗಳು ಎಂದು ಪರಿಗಣಿಸಿರಲಿಲ್ಲ, ಹಿಂದೂಗಳೆಂದರೆ ಹೊಡೆತ ತಿಂದವರು, ಹೇಡಿಗಳು ಎಂದೇ ಅವರು ತಿಳಿದಿದ್ದರು, ಅದಕ್ಕಾಗಿಯೇ ಅವರು ಮುಸ್ಲಿಂ ತುಷ್ಟೀಕರಣಕ್ಕೆ ಅತಿಯಾಗಿ ಬೆನ್ನೆಲುಬಾಗಿ ನಿಂತರು, ಆದರೆ ಡಾ.ಕೇಶವರಾವ್ ಅವರು ಹಿಂದೂ ಸಮಾಜದ ಮೇಲೆ ದೊಡ್ಡ ಭರವಸೆ ಇಟ್ಟು ಸಂಘ ಪರಿವಾರವನ್ನು ಕಟ್ಟಿದರು ಎಂದರು.
ಅಪಮಾನ – ಅಪಹಾಸ್ಯದ ನಡುವೆಯೂ ಸಂಘ ಪರಿವಾರ ವಿಚಲಿತವಾಗಲಿಲ್ಲ..
ಸಂಘ ಪರಿವಾರಕ್ಕೆ ಅನೇಕ ಅಪಮಾನಗಳು, ಅಪಹಾಸ್ಯಗಳು ಎದುರಾದರೂ ಸಂಘ ಪರಿವಾರ ವಿಚಲಿತವಾಗಲಿಲ್ಲ, ಗಾಂಧೀ ಕೊಂದವರು ಎಂಬ ಮಿಥ್ಯಾರೋಪ ಸಂಘ ಪರಿವಾರದ ಮೇಲೆ ಬಂದಿತು, ಅನೇಕ ಸಂಘಪರಿವಾರದ ಕಾರ್ಯಕರ್ತರನ್ನು ಕೊಲೆ ಮಾಡಲಾಯಿತು, ಸಂಘ ಪರಿವಾರದವರು ಮಾರುಕಟ್ಟೆಗೆ ಹೋದರು `ಗಾಂಧೀ ಕೊಂದವರು’ ಎಂದು ಅಪಹಾಸ್ಯಮಾಡುವ ದೃಶ್ಯಗಳು ಸಹ ಆಗಿದ್ದವು ಎಂದರು.
ಅವಕಾಶವಾದಿಗಳಾಗಿ ಈ ದೇಶವನ್ನು ಜೀವನ ಪರ್ಯಂತ ಆಳಬೇಕು ಎಂದು ಯೋಚನೆ ಮಾಡಿ ಗಾಂಧೀ ಹತ್ಯೆ ಆರೋಪ ಹೊರೆಸಿ ಸಂಘ ನಿಷೇಧ ಹೇರಲಾಯಿತು, ಮಿಥ್ಯಾರೋಪಗಳನ್ನು ಸಹ ಸಮರ್ಥವಾಗಿ ಎದುರಿಸಿದ ಸಂಘ ಇಂದು ವಿಶಾಲವಾಗಿ ಬೆಳೆದಿದೆ, ದ್ವೇಷಿಸುವವರನ್ನೂ ಸಹ ದ್ವೇಷದಿಂದ ಸಂಘ ಪರಿವಾರ ಕಂಡಿಲ್ಲ, ಸಂಘದ ಚಿಂತನೆ ಅಳವಡಿಸಿಕೊಂಡು ಅನೇಕ, ಸಂಘದ ಕಾರ್ಯ ಸಫಲತೆಯಿಂದ ನಡೆಯುತ್ತಿದೆ ಎಂದರು.
ದೇಶಕ್ಕಾಗಿ ಬದುಕಬೇಕು ಎಂಬ ಸಂಕಲ್ಪವನ್ನು ಜಾಗೃತಗೊಳಿಸಬೇಕು, ಈ ದೇಶಕ್ಕಾಗಿ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಡಾ.ಕೇಶವ ಬಲಿರಾಮ್ ಹೆಡಗೇವಾರ ಸ್ಥಾಪಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಾಮಾಜಿಕ ಸಂಘಟನೆ ಜೀವನದಲ್ಲಿ ನೂರು ವರ್ಷ ನಿರಂತರ ಸೇವೆ ಸಲ್ಲಿಸುತ್ತಾ ಮುನ್ನಡೆದಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮೇದಾರ ಕೇತಯ್ಯ ಸಮಾಜದ ಅಧ್ಯಕ್ಷ ವಿಠ್ಠಲ ಪರಾಂಡೆ ಮಾತನಾಡಿರು. ಜಿಲ್ಲಾ ಸಂಘ ಚಾಲಕ ರಾಮಸಿಂಗ ಹಜೇರಿ ಅಧ್ಯಕ್ಷತೆ ವಹಿಸಿದ್ದರು.
ಗಣವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ
ವಿಜಯಪುರ: ದಾರಿಯಲ್ಲಿ ಚಿತ್ತಾಕರ್ಷಕ ರಂಗವಲ್ಲಿ.. ದಾರಿಯುದ್ದಕ್ಕೂ ಪುಷ್ಪವೃಷ್ಟಿ.. ಪಥಸಂಚಲನೆ ವೀಕ್ಷಣೆಗೆ ಸಾಲಾಗಿ ನಿಂತ ಜನರಿಂದ ಮುಗಿಲು ಮುಟ್ಟಿದ ಭಾರತ ಮಾತಾ ಕೀ ಜೈ.. ವಂದೇ ಮಾತರಂ.. ಎನ್ನುವ ಉದ್ಘೋಷ..
ಈ ಎಲ್ಲ ಅಪೂರ್ವ ದೃಶ್ಯಾವಳಿಗಳ ಮಧ್ಯದಲ್ಲಿ ಶುಭ್ರ ಬಿಳಿಬಣ್ಣದ ಅಂಗಿ, ಖಾಕಿ ಪ್ಯಾಂಟ್, ಕೈಯಲ್ಲಿ ಲಾಠಿ, ಕಪ್ಪು ಬಣ್ಣದ ಟೋಪಿ ಧರಿಸಿದ ಸಾವಿರಾರು ಗಣವೇಷಧಾರಿಗಳ ಶಿಸ್ತುಬದ್ಧ ಹಾಗೂಐ ಆಕರ್ಷಕ ಪಥ ಸಂಚಲನ ಸಾಗಿ ಬಂದಿತು.
ರಾಷ್ಟಿಯ ಸ್ವಯಂ ಸೇವಕ ಸಂಘ ೧೦೦ ವಸಂತ ಪೂರ್ಣಗೊಂಡ ಸಂದರ್ಭದಲ್ಲಿ ಈ ಬಾರಿ ಪಥಸಂಚಲನಕ್ಕೆ ವಿಶೇಷ ಮೆರಗು ಕೂಡಿತ್ತು. ಸಾವಿರಾರು ಸಂಖ್ಯೆಯಲ್ಲಿ ಗಣವೇಷಧಾರಿಗಳು ಪಥಸಂಚಲನೆಯಲ್ಲಿ ಭಾಗಿಯಾದರು. ಹಿರಿಯರು ಯುವಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರೆ ಚಿಕ್ಕಮಕ್ಕಳು ಸಹ ಗಣವೇಷದಲ್ಲಿ ಶಿಸ್ತುಬದ್ಧವಾಗಿ ಪಥಸಂಚಲನೆಯಲ್ಲಿ ಸಾಗಿದರು.
ಸುಶ್ರಾವ್ಯವಾದ ಹಿಮ್ಮೇಳನ, ಕೊಳಲಿನ ವಾದನ ಹೀಗೆ ಸಂಗೀತದ ವೈಭವಯುತ ಹಿಮ್ಮೇಳನದಲ್ಲಿ ಪಥಸಂಚಲನೆ ಸಾಗಿತು. ಪಥಸಂಚಲನೆ ಸಾಗುವ ದಾರಿಯುದ್ದಕ್ಕೂ ಚಿತ್ತಾಕರ್ಷಕ ರಂಗವಲ್ಲಿ ಕಣ್ಮನ ಸೆಳೆಯುವಂತಿತ್ತು. ಪಥಸಂಚಲನಾ ತಂಡಗಳ ಮುಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರಾದ ಡಾ.ಕೇಶವ ಹೆಡಗೇವಾರ ಹಾಗೂ ಶ್ರೀ ಮಾಧವ ಸದಾಶಿವ ಗೊಲ್ವಾಲ್ಕರ ಅವರ ಭಾವಚಿತ್ರ ಇರಿಸಿದ ಪುಷ್ಪಾಲಂಕೃತ ರಥ ಸಾಗಿತು. ಸಾರ್ವಜನಿಕರು ಪಥಸಂಚಲನ ಸಾಗುವ ಎರಡು ಬದಿಯಲ್ಲಿ ಅತ್ಯಂತ ಶಿಸ್ತುಬದ್ದವಾಗಿ ನಿಂತು ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿ ಮಾಡಿದರು. ಅಲ್ಲಲ್ಲಿ ಸಣ್ಣ ಮಂಟಪಗಳನ್ನು ನಿರ್ಮಿಸಲಾಯಿತು. ಅಲ್ಲಿ ರಾಷ್ಟ್ರಭಕ್ತರ ವೇಷದಲ್ಲಿ ಚಿಣ್ಣರು ಕಂಗೊಳಿಸಿ ಗಮನ ಸೆಳೆದರು.
ಡಾ.ಬಾಬು ಜಗಜೀವನರಾಂ ವೃತ್ತದಿಂದ ಸಾಗಿದ ಪಥಸಂಚಲನ ವಾಟರ್ ಟ್ಯಾಂಕ್ ಸರ್ಕಲ್, ಶಿವಾಜಿ ವೃತ್ತ, ಉಪಲಿ ಬುರುಜ್, ಡಾ.ಕೇಶವ ಹೆಡಗೇವಾರ ವೃತ್ತ, ಗಾಂಧೀಜಿ ವೃತ್ತ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಾಗಿ ದರಬಾರ ಹೈಸ್ಕೂಲ್ ಮೈದಾನಕ್ಕೆ ತಲುಪಿ ಸಂಪನ್ನಗೊಂಡಿತು.