ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ರಾಜ್ಯದಲ್ಲಿ ಧರ್ಮಸ್ಥಳ ಸಂಸ್ಥೆಯು ಸ್ವ-ಸಹಾಯ ಸಂಸ್ಥೆಗಳಿಗೆ ಆರ್ಥಿಕ ಸಹಾಯ ಮಾಡುವುದಷ್ಟೇ ಅಲ್ಲ ಸಮಾಜಮುಖಿ ಕೆಲಸ ಮಾಡುತ್ತಿದೆ ಹೀಗಾಗಿ ಧರ್ಮಸ್ಥಳ ಸಂಸ್ಥೆಯವ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ ಹೇಳಿದರು.
ಅವರು ಪಟ್ಟಣದ ಶ್ರೀ ಮಳೇಂದ್ರ ಶಿವಾಚಾರ್ಯ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ನಡೆದ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ಯುವ ಪೀಳಿಗೆ ಮದ್ಯವೇಸನದಂತ ಕೆಟ್ಟ ಚಟಗಳಿಂದ ದೂರವಿದ್ದು ಸುಂದರ ಜೀವನ ನಡೆಸಬೇಕು. ಇತ್ತೀಚಿಗೆ ಮದ್ಯ ಸೇವನೆ ಅತೀಯಾಗಿ ಮಾಡುತ್ತಿರುವುದು ಕಂಡು ಬರುತ್ತಿದೆ. ಕುಡಿತದಿಂದ ಕುಟುಂಬಗಳು ಹಾಳಾಗಿವೆ ಎಂದ ಅವರು ಧರ್ಮಸ್ಥಳ ಸಂಸ್ಥೆಯವರು ಮದ್ಯವ್ಯಸನಕ್ಕೆ ದಾಸರಾದವರನ್ನು ಸರಿ ದಾರಿಗೆ ತರುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಇನ್ನೂ ಗ್ರಾಮೀಣ ಭಾಗದಲ್ಲಿ ಮದ್ಯ ಸೇವನೆ ಅತೀಯಾಗಿ ಕಂಡು ಬರುತ್ತಿದೆ. ಸರಾಯಿ ಸೇವನೆ ನಿರ್ಬಂಧ ಹೇರವುದು ಸರಕಾರಕ್ಕೂ ಸಾಧ್ಯವಾಗುವುದಿಲ್ಲ. ಸ್ಥಳೀಯ ಮಹಿಳೆಯರು ಒಗ್ಗಟ್ಟಾಗಿ ಸರಾಯಿ ಸೇವನೆ ನಿರ್ಬಂಧ ಹೇರುವ ಕೆಲಸ ಮಾಡಬೇಕು ಎಂದರು.
ಇಂದು ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ಪ್ರವೇಶ ಪಡೆದುಕೊಂಡವರು ದುಶ್ಚಟಗಳಿಂದ ದೂರವಿದ್ದು ಬದುಕು ಸುಂದರವಾಗಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ವ್ಯಸನಮುಕ್ತರು ಸಮಾಜಕ್ಕೆ ಮತ್ತು ಮನೆಗೂ ಬೇಡವಾದಂತವರನ್ನು ತಂದು ಕುಡಿತಕ್ಕೆ ದಾಸರಾದವರನ್ನು ಸರಿ ದಾರಿಗೆ ತರುವ ಕೆಲಸ ಧರ್ಮಸ್ಥಳ ಕ್ಷೇತ್ರ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವುದಲ್ಲದೆ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಿಸಿ ಪ್ರತಿ ತಿಂಗಳು 9 ಸಾವಿರ ರೂಪಾಯಿ ವೇತನ ಧರ್ಮಸ್ಥಳ ಕ್ಷೇತ್ರ ನೀಡುತ್ತಿದೆ ಎಂದ ಅವರು ಧರ್ಮಸ್ಥಳದ ಹುಂಡಿ ಹಣವನ್ನು ಪ್ರೋತ್ಸಾಹೇ ಸಂಘಗಳಿಗೆ ನೀಡುತ್ತಿದ್ದಾರೆ ಎಂದು ಕಿಡಗೇಡಿಗಳು ಹೇಳುತ್ತಿದ್ದಾರೆ. ಆದರೆ ಹುಂಡಿ ಹಣವನ್ನು ಧರ್ಮದ ಕಾರ್ಯಕ್ಕೆ ಮಾತ್ರ ಬಳಕೆ ಮಾಡುತ್ತಿದೆ ಎಂದು ಹೇಳಿದರು.
ತಹಸಿಲ್ದಾರ ಸಂಜೀವಕುಮಾರ ದಾಸರ್ ಮುಖಂಡರಾದ ಲಚ್ಚಪ್ಪ ಜಮಾದಾರ, ಶಿವಾನಂದ ಚಿಂಚೋಳಿ ಮಾತನಾಡಿದರು.
ಮದ್ಯಾವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಂಬಣ್ಣ ಕುದುರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಸಿ.ಎನ್.ಬಾಬಳಗಾಂವ, ಸಂಗ್ರಾಮಗೌಡ ಪಾಟೀಲ್, ಶಿವಾನಂದ ಗಾಡಿಸಾಹುಕಾರ, ಮಲ್ಲಿಕಾರ್ಜುನ ನಿಂಗದಳ್ಳಿ, ಸಿದ್ಧಾರ್ಥ ಬಸರಿಗಿಡ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ, ಪ್ರಭಾವತಿ ಮೇತ್ರಿ, ಸಿದ್ದಪ್ಪ ಪೈಲ್ವಾನ್, ಚಿನ್ನು ಮನಿಯಾರ, ಮಹಾಂತೇಶ ಬಡಿಗೇರ, ರಾಚಪ್ಪ, ಪಾರ್ವತಿ ಮಠಪತಿ, ಶರಣು, ಮಲ್ಲಿಕಾರ್ಜುನ, ಭಗವಂತ್ರಾಯ, ವಿವೇಕ, ಅಭಯಕುಮಾರ್, ರಾಜೇಶ್ ಕೆ, ವೆಂಕಟೇಶ್ ಸೇರಿದಂತೆ ಅನೇಕರು ಇದ್ದರು.
ತಾಲೂಕ ಯೋಜನಾಧಿಕಾರಿ ಮಹಾಂತೇಶ ಎಸ್ ನಿರೂಪಿಸಿ ವಂದಿಸಿದರು.