ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ ಜನಿಸಿದ ಮನೆ ಜೀರ್ಣೋದ್ಧಾರಕ್ಕಾಗಿ ಪತ್ರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿಂದೂಸ್ತಾನಿ ಸಂಗೀತದ ಮೇರು ಗಾಯಕರಾದ ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರು ಜನಿಸಿದ ಮನೆಯನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡುವಂತೆ ಒತ್ತಾಯಿಸಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.
ಡಾ.ಗಂಗೂಬಾಯಿ ಹಾನಗಲ್ ಅವರ ಗೌರವಾರ್ಥವಾಗಿ ಧಾರವಾಡ ನಗರದಲ್ಲಿ ನಿರ್ಮಾಣವಾಗಿದ್ದ ಸ್ಮಾರಕ, ಗಂಗೋತ್ರಿ ಹೆಸರಿನ ವಸ್ತು ಸಂಗ್ರಹಾಲಯ ಹಾಗೂ ಸಂಗೀತ ಶಾಲೆ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಸದರಿ ಸ್ಮಾರಕ ಕಟ್ಟಡವು ಹತ್ತೇ ವರ್ಷದಲ್ಲಿ ಪಾಳು ಬಿದ್ದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಸಡ್ಡೆಗೆ ಹಿಡಿದ ಕೈಗನ್ನಡಿ.
ಸಂಗೀತ ಕ್ಷೇತ್ರದ ಬೆಳವಣಿಗೆಗೆ ತಮ್ಮ ಜೀವನದುದ್ದಕ್ಕೂ ಸೇವೆಯನ್ನು ಸಲ್ಲಿಸಿ, ನಮ್ಮ ನಾಡು ಹಾಗೂ ದೇಶದ ಕೀರ್ತಿಯನ್ನು ವಿಶ್ವವ್ಯಾಪಿ ಪಸರಿಸುವಂತೆ ಮಾಡಿದ ಸಂಗೀತ ದಿಗ್ಗಜೆ ಗಂಗೂಬಾಯಿ ಅವರು ಜನಿಸಿದ ಮನೆಯನ್ನು ಸಂಪೂರ್ಣವಾಗಿ ನವೀಕರಿಸಿ ಅವರಿಗೆ ಗೌರವ ಸಲ್ಲಿಸಬೇಕಾದದ್ದು ಸರ್ಕಾರದ ಕರ್ತವ್ಯ. ಅವರು ಜನಿಸಿದ ಮನೆಯ ಜಾಗದಲ್ಲಿ ಸರ್ಕಾರ ಸ್ಮಾರಕವನ್ನು ನಿರ್ಮಿಸಬೇಕು, ಇದೆ ಜಾಗದಲ್ಲಿ ಅವರ ಪ್ರತಿಮೆಯನ್ನು ಅನಾವರಣ ಮಾಡಬೇಕು. ಮುಂದಿನ ಪೀಳಿಗೆಗೆ ಗಾಯನಗಂಗೆ ವಿಧುಷಿ ಡಾ. ಗಂಗೂಬಾಯಿ ಹಾನಗಲ್ ರವರು ಮೇರುವ್ಯಕ್ತಿತ್ವವಾಗಿ ಪರಿಚಯವಾಗಬೇಕು.
ಈ ನಿಟ್ಟಿನಲ್ಲಿ ಸರ್ಕಾರವು ಶತಮಾನದ ಇತಿಹಾಸವುಳ್ಳ ಡಾ. ಗಂಗೂಬಾಯಿ ಹಾನಗಲ್ ಅವರ ಮನೆಯನ್ನು ಸಂಪೂರ್ಣವಾಗಿ ಜೀರ್ಣೋದ್ದಾರ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಿರ್ದೇಶಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.