ಬರ ಪರಿಸ್ಥಿತಿಯ ಅಧ್ಯಯನಕ್ಕೆ ವಿಜಯಪುರಕ್ಕೆ ಆಗಮಿಸಿದ ಕೇಂದ್ರ ತಂಡ | ಜಿಲ್ಲೆಯ ವಾಸ್ತವ ಸ್ಥಿತಿ ಮನವರಿಕೆ
ವಿಜಯಪುರ: ಜಿಲ್ಲೆಯ ಬರ ಪರಿಸ್ಥಿತಿಯ ಅಧ್ಯಯನಕ್ಕೆ ಆಗಮಿಸಿದ ಕೇಂದ್ರ ತಂಡಕ್ಕೆ ಜಿಲ್ಲೆಯ ಬರ ಪರಿಸ್ಥಿತಿಯ ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಐ.ಎ.ಎಸ್ ಅಧಿಕಾರಿಗಳಾದ ಅಜಿತ್ ಕುಮಾರ್ ಸಾಹು ಅವರ ನೇತೃತ್ವದಲ್ಲಿ ಎಣ್ಣೆ ಬೀಜಗಳ ಅಭಿವೃದ್ದಿ ಇಲಾಖೆಯ ನಿರ್ದೇಶಕರಾದ ಡಾ. ಜೆ ಪೊನ್ನುಸ್ವಾಮಿ, ವೆಚ್ಚ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹೇಂದ್ರ ಚಂಡೇಲಿಯ, ನೀತಿ ಆಯೋಗದ ಸಂಶೋಧನಾಧಿಕಾರಿ ಶಿವಚರಣ್ ಮೀನಾ, ರಾಜ್ಯ ಕೃಷಿ ಆಯುಕ್ತರಾದ ವೈ.ಎಸ್ ಪಾಟೀಲ್‌ರನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡ ಶುಕ್ರವಾರ ವಿಜಯಪುರ ಜಿಲ್ಲೆಯ ಬಬಲೇಶ್ವರ ಹಾಗೂ ಇಂಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ ತೀವ್ರ ಬರದಿಂದ ಹಾನಿಗೊಳಗಾದ ಕೃಷಿ ಹಾಗೂ ತೊಟಗಾರಿಕೆ ಬೆಳೆಗಳ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಬರ ಅಧ್ಯಯನ ತಂಡ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ರಾಜಕುಮಾರ ದೇಸಾಯಿ ಅವರ ಹೊಲದಲ್ಲಿ ತೊಗರಿ ಬೆಳೆ ಹಾಗೂ ಮೆಕ್ಕೆಜೋಳ ಬೆಳೆ, ಶಾಂತಾಬಾಯಿ ಎಂಬುವರ ಜಮೀನಿನಲ್ಲಿ ಬೆಳೆಯಲಾದ ಕಬ್ಬು ಬೆಳೆ, ಮಳೆಯ ಅಭಾವದಿಂದ ನೀರಿಲ್ಲದೇ ಬತ್ತಿ ಹೋದ ಯಕ್ಕುಂಡಿ ಕೆರೆ, ಸಿದ್ರಾಮಪ್ಪ ಪಿ. ಕಾಖಂಡಕಿ ಅವರ ೪ ಎಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಸಾರವಾಡದ ಸಂಗಮೇಶ ಶಿವಪ್ಪ ಸೋಮಕ್ಕನವರ ಜಮೀನಿನಲ್ಲಿ ಬೆಳೆದಿರುವ ಈರುಳ್ಳಿ ಬೆಳೆ ಸೇರಿದಂತೆ ಮಳೆ ಇಲ್ಲದೇ ಹಾನಿಗೊಳಗಾದ ರೈತನೋರ್ವರ ಮೆಣಸಿನಕಾಯಿ ಬೆಳೆಯನ್ನು ವೀಕ್ಷಿಸಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ ಅವರು ಮಾಹಿತಿ ನೀಡಿ, ರಾಜ್ಯದಲ್ಲಿಯೇ ಅತಿ ಹೆಚ್ಚು ಜಿಲ್ಲೆ ಬರಕ್ಕೆ ತುತ್ತಾಗಿ, ಜಿಲ್ಲೆಯಲ್ಲಿ ಬೆಳೆಗಳು ಹಾಳಾಗಿರುವ ಕುರಿತು ಮಾಹಿತಿ ಒದಗಿಸಿದರು.
ಈ ಸಂದರ್ಭದಲ್ಲಿ ಸಾರವಾಡದ ರೈತ ಸಂಗಮೇಶ ಶಿವಪ್ಪ ಸೋಮಕ್ಕನವರ ತನ್ನ ಜಮೀನಿನಲ್ಲಿ ಬೆಳೆದಿರುವ ಈರುಳ್ಳಿ ಬೆಳೆ ಬರದಿಂದ ಹಾಳಾಗಿರುವ ಕುರಿತು ೩ ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆಯಲ್ಲಿ ೯೬ ಸಾವಿರ ರೂ. ಖರ್ಚು ಮಾಡಿ, ಮಳೆಯಿಲ್ಲದೇ ಬೆಳೆ ಕೈಗೆ ಬರದೆ ತೀವ್ರ ಸಂಕಷ್ಟಕ್ಕೀಡಾಗಿರುವ ಕುರಿತು ಕೇಂದ್ರ ತಂಡದ ಮುಂದೆ ತಮ್ಮ ಅಳಲನ್ನು ತೋಡಿಕೊಂಡನು.
ಬಬಲೇಶ್ವರ ತಾಲೂಕಿನ ವಿವಿಧೆಡೆ ಬೆಳೆಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸಿದ ತಂಡ ಇಂಡಿ ತಾಲೂಕಿಗೆ ಪ್ರಯಾಣ ಬೆಳೆಸಿತು.
ಇಂಡಿಯಲ್ಲಿ ಚಂದ್ರಮೌಳಿ ಚಿದಾನಂದ ಹಿರೇಮಠ ಅವರ ಜಮೀನಿನಲ್ಲಿ ಬೆಳೆದ ಲಿಂಬೆ ಬರದಿಂದ ನೀರಿನಿಲ್ಲದೇ ಬೆಳೆ ಶೇ.೮೦ ಒಣಗಿ, ಶೇ.೮೦ ಹೂ ಕಟ್ಟದೇ ಬೆಳೆ ಹಾನಿಯಾಗಿರುವ ಕುರಿತು ಹಾಗೂ ಮುರಳಿಧರ ಪುಂಡಲೀಕ ಜಾಗೀರದಾರ ಅವರ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಮತ್ತು ಕಬ್ಬು ಬೆಳೆ ಸೇರಿದಂತೆ ಕೇಂದ್ರ ತಂಡ ಇಂಡಿ ತಾಲೂಕಿನ ರೈತರ ಲಿಂಬೆ, ಮೆಕ್ಕೆ ಜೋಳ, ಕಬ್ಬು ಬೆಳೆ ಹಾನಿ ಪರಿಶೀಲಿಸಿತು.
ಈ ಸಂದರ್ಭಧಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ, ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಬಬಲೇಶ್ವರ ತಹಶೀಲ್ದಾರ ಸಂತೋಷ ಮ್ಯಾಗೇರಿ ಸೇರಿದಂತೆ ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.