ಅವ್ಯವಸ್ಥೆಯ ಆಗರವಾದ ವಸತಿ ನಿಲಯ | ಕುಡುಕರ ಅಡ್ಡೆಯಾಗಿ ಪರಿವರ್ತನೆ
ಉದಯರಶ್ಮಿ ದಿನಪತ್ರಿಕೆ
ವರದಿ: ರಶ್ಮಿ ಮಹಾಂತೇಶ ನೂಲಾನವರ
ಸಿಂದಗಿ: ನಗರದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಿಸಲಾಗಿದೆ. ಈ ವಸತಿ ನಿಲಯ ಪೂರ್ಣಗೊಂಡು ಅನೇಕ ವರ್ಷಗಳೇ ಗತಿಸಿದ್ದು, ಇಲ್ಲಿಯವರೆಗೂ ಈ ವಸತಿ ನಿಲಯದ ಕಟ್ಟಡ ವಿದ್ಯಾರ್ಥಿಗಳಿಗೆ ಬಳಕೆಯಾಗಿಲ್ಲದಿರುವುದು ವಿಪರ್ಯಾಸ. ಹೀಗಾಗಿ ಈ ಕಟ್ಟಡ ಇದ್ದು ಇಲ್ಲದಂತಾಗಿದೆ. ಹಲವು ವರ್ಷಗಳಿಗೆ ಬಳಕೆಯಾಗದ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಿರ್ಮಿಸಲಾದ ಈ ಕಟ್ಟಡ ಉದ್ಘಾಟನೆಗೊಳ್ಳದೆ ಪಾಳು ಬಿದ್ದ ಕಾರಣ ಬಾಗಿಲು, ಕಿಟಕಿಗಳನ್ನು ಕಿಡಕೇಡಿಗಳು ಒಡೆದು ಹಾಕುತ್ತಿದ್ದಾರೆ. ತಿಂಗಳಿಗೆ ಬಾಡಿಗೆ ರೂಪದಲ್ಲಿ ಮಕ್ಕಳಿಗೆ ಹಣವನ್ನು ಸರಕಾರ ಬರಿಸುತ್ತದೆ. ಆದರೆ ಇಷ್ಟು ಸುಂದರವಾದ ಕಟ್ಟಡವನ್ನು ನಿರ್ಮಿಸಿ, ಉದ್ಘಾಟನೆಗೊಳಿಸದೆ, ಬಳಸಿಕೊಳ್ಳದೆ ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ಮಾಡುತ್ತಿರುವುದು ಖೇದಕರ ಸಂಗತಿ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅನೈತಿಕ ಚಟುವಟಿಕೆಯ ಅಡ್ಡೆ: ಸರಕಾರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ನಿಲಯಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿಯೊಂದು ಕಟ್ಟಡವು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದಿಸೆಯಲ್ಲಿ ಯೋಜನೆ ರೂಪಿಸಿ ಕಟ್ಟಲಾಗುತ್ತದೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಟ್ಟಿದ ಕಟ್ಟಡವನ್ನು ಉದ್ಘಾಟನೆ ಮಾಡದೆ ಹಾಗೆ ಬಿಟ್ಟಿರುವ ಕಾರಣ ಅನೈತಿಕ ಚಟುವಟಿಕೆಯ ಅಡ್ಡೆಯಾಗಿ ಅಲ್ಲಿ ಸಾರಾಯಿ ಬಾಟಲಿ, ಸಿಗರೇಟಿನ ತುಂಡುಗಳು ದ್ವಾರ ಬಾಗಿಲಿನಲ್ಲಿಯೇ ಸ್ವಾಗತಿಸುತ್ತವೆ.
ಆರಂಭವಾಗದ ವಸತಿ ನಿಲಯ: ಸರಕಾರಿ ಪದವಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ನಿರ್ಮಾಣವಾದ ಈ ಕಟ್ಟಡ. ಆದರೆ ಪ್ರಾರಂಭವಾಗಬೇಕಾದ ವಸತಿ ನಿಲಯ ಇನ್ನೂ ಆರಂಭವಾಗಿಲ್ಲ. ಈ ಕಟ್ಟಡ ಇನ್ನೂ ಸಮಾಜ ಕಲ್ಯಾಣ ಇಲಾಖೆಯ ಅಧೀನಕ್ಕೆ ಬಂದಿಲ್ಲ. ಇದನ್ನು ಸಮಾಜ ಕಲ್ಯಾಣ ಇಲಾಖೆ ತನ್ನ ಅಧೀನಕ್ಕೆ ತೆಗೆದುಕೊಂಡು ಖಾಸಗಿ ಪಟ್ಟಡ ಬಾಡಿಗೆ ಪಡೆದು ವಸತಿ ನಡೆಸುವ ಬದಲಿಗೆ ಪೂರ್ಣಗೊಂಡ ವಸತಿ ನಿಲಯ ಪ್ರಾರಂಭವಾದರೆ ಪ್ರತಿನಿತ್ಯ ನಾವು ಪಡುವ ಕಷ್ಟವಾದರು ತಪ್ಪುತ್ತದೆ ಎಂಬುದು ವಿದ್ಯಾರ್ಥಿಗಳ ಆಳಲಾಗಿದೆ.
ಇದು ಯಾರ ವಸತಿ ನಿಲಯ: ಕಾಲೇಜು ಶಿಕ್ಷಣ ಇಲಾಖೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಾಲಕರ ವಸತಿ ನಿಲಯವೋ ಇಲ್ಲ ಸಮಾಕ ಕಲ್ಯಾಣ ಇಲಾಖೆಯ ವಸತಿ ನಿಲಯವೋ ಎಂಬ ಗೊಂದಲದಲ್ಲಿ ಸಿಂದಗಿಯ ಜನತೆಯಿದೆ.

“ವಸತಿ ನಿಲಯವನ್ನು ಸಮಾಜ ಕಲ್ಯಾಣ ಇಲಾಖೆ ಹಸ್ತಾಂತರ ಮಾಡಿಕೊಂಡು ಪದವಿ ಕಾಲೇಜಿನ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೇಳಿ ಮಾಹಿತಿ ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಕೆಲವು ದಿನಗಳಲ್ಲಿ ಆಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.”
– ಎಸ್.ಎಸ್.ಹಳೇಮನಿ
ಪ್ರಾಚಾರ್ಯರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಿಂದಗಿ
“ಕೇವಲ ಒಂದು ಪತ್ರದ ಮೂಲಕ ಹಸ್ತಾಂತರಿಸಿಕೊಳ್ಳಲು ಬರುವುದಿಲ್ಲ. ಇದರ ಕುರಿತಾಗಿ ಆಯುಕ್ತರ ಗಮನಕ್ಕೆ ತಂದು ಆಯುಕ್ತರ ಕಡೆಯಿಂದ ಎಲ್ಲ ದಾಖಲೆಗಳನ್ನು ಪಡೆದುಕೊಂಡು ಅದರ ವಸ್ತುಸ್ಥಿತಿಯ ಬಗ್ಗೆ ನೋಡಿ ಹಸ್ತಾಂತರಗೊಳಿಕೊಂಡು ಆದಷ್ಟೂ ಬೇಗ ಪ್ರಾರಂಭಿಸಲಾಗುವುದು.”
– ಭವಾನಿ ಪಾಟೀಲ
ತಾಲೂಕು ಗ್ರೇಡ್-೧ ಸಹಾಯಕ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ, ಸಿಂದಗಿ