ಸಹಕಾರಿ ಕಾಯ್ದೆಗಳಿಗೆ ತಿದ್ದುಪಡಿ, ಅಭಿವೃದ್ಧಿ ಸಮಾಲೋಚನೆ ತರಬೇತಿ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಹಕಾರಿ ರಂಗದಲ್ಲಿರುವ ಎಲ್ಲರೂ ಪ್ರಾಮಾಣಿಕ, ಪಾರದರ್ಶಕ ಹಾಗೂ ಸೇವಾ ಮನೋಭಾವದ ಜೊತೆಗೆ ಕಾನೂನಿನ ಅರಿವಿನೊಂದಿಗೆ ಕೆಲಸ ಮಾಡಿಬೇಕಿದೆ. ಹಾಗಾದಲ್ಲಿ ಸಹಕಾರಿ ರಂಗವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಸಾಧ್ಯವಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಶುಕ್ರವಾರ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ವಿಜಾಪುರ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘ ಹಾಗೂ ಸಹಕಾರಿ ಸಹಕಾರ ಒಕ್ಕೂಟದ ಸಹಯೋಗದಲ್ಲಿ ಪಟ್ಟಣ ಸಹಕಾರಿ ಬ್ಯಾಂಕ್, ಪತ್ತಿನ ಸಹಕಾರಿ ಸಂಘಗಳು ಹಾಗೂ ವಿವಿಧೊದ್ದೇಶಗಳ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಾಹಕರಿಗೆ ಹಮ್ಮಿಕೊಂಡಿದ್ದ ಸಹಕಾರಿ ಕಾಯ್ದೆಗಳಿಗೆ ತಿದ್ದುಪಡಿ, ಅಭಿವೃದ್ಧಿ ಹಾಗೂ ಎದುರಿಸುತ್ತಿರುವ ಸವಾಲುಗಳ ಸಮಾಲೋಚನೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಹಕಾರಿ ರಂಗದ ಬಲವರ್ಧನೆಗೆ ಸರ್ಕಾರಗಳು ಮೇಲಿಂದ ಮೇಲೆ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತವೆ. ಸರ್ಕಾರದ ನಿಯಮಗಳ ಪಾಲನೆಯೊಂದಿಗೆ ಸಹಕಾರಿ ಬಲವರ್ಧನೆಗೆ ಶ್ರಮಿಸಬೇಕಿದೆ ಎಂದರು.
ಪ್ರಸಕ್ತ ಸ್ಪರ್ಧಾತ್ಮಕ ಸಂದರ್ಭದಲ್ಲಿ ಸಹಕಾರಿ ರಂಗದ ಪ್ರಗತಿ ನಿರೀಕ್ಷಿತದಂತೆ ಪ್ರಗತಿ ಕಂಡಿಲ್ಲ ಎಂಬುದು ಸತ್ಯವಾದರೂ ತೀರಾ ನಿರಾಶಾದಾಯವಾಗೇನೂ ಇಲ್ಲ. ಕಾನೂನು ಚೌಕಟ್ಟಿನೊಳಗಿನ ವ್ಯವಹಾರ ಒಂದೆಡೆಯಾದರೆ, ಮಾನವೀಯ ನೆಲೆಯಲ್ಲಿ ವ್ಯವಹರಿಸುವ ಮೂಲಕ ಸಹಕಾರಿ ರಂಗದಲ್ಲಿ ಅಭಿವೃದ್ಧಿಯ ಪರಿವರ್ತನೆ ತರುವ ಅಗತ್ಯವಿದೆ. ರೈತರು, ಜನ ಸಾಮಾನ್ಯರ ಆರ್ಥಿಕ ಜೀವನ ಮಟ್ಟ ಸುಧಾರಣೆಗಾಗಿ ಸಹಕಾರಿ ವ್ಯವಸ್ಥೆಯಲ್ಲಿ ಇರುವ ಎಲ್ಲರೂ ಬದ್ಧತೆಯಿಂದ ಸೇವೆ ಸಲ್ಲಿಸಬೇಕಿದೆ ಎಂದರು.
ಸಹಕಾರಿ ರಂಗದಲ್ಲಿ ಉತ್ತುಂಗದಲ್ಲಿರುವ ಸಹಕಾರಿ ಸಂಸ್ಥೆಗಳೂ ಇವೆ, ಕೆಲವು ಸಾಮಾನ್ಯ ಸ್ಥಿತಿಯಲ್ಲೂ, ಮತ್ತೆ ಕೆಲವು ಸುಧಾರಣೆ ಹಂತದಲ್ಲೂ, ಇನ್ನಷ್ಟು ಸಂಸ್ಥೆಗಳು ಸಂಕಷ್ಟದ ಸ್ಥಿತಿಯಲ್ಲಿವೆ. ಆದರೆ ಸೋತವರನ್ನು ಕೈ ಬಿಡದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದು ಇಂದಿನ ಅಗತ್ಯವಾಗಿದೆ ಎಂದರು.
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಅವರು ಮಾತನಾಡಿ, ಸಹಕಾರಿ ಕ್ಷೇತ್ರದ ಬಲವರ್ಧನೆಗಾಗಿ ಸಹಕಾರಿ ಪತ್ತಿನ ಸಂಘಗಳು ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹಿಸಿ, ಆರ್ಥಿಕ ಸುಸ್ಥಿತಿ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಹಕಾರಿ ಸಂಘಗಳ ವಿಶ್ರಾಂತ ಅಪರ ನಿಬಂಧಕ ಎಂ.ಜಿ.ಪಾಟೀಲ ಅವರು, ಸಹಕಾರಿ ಸಂಘಗಳ ಕಾಯ್ದೆಗಳ ಇತ್ತೀಚಿನ ತಿದ್ದುಪಡಿ, ಪತ್ತಿನ ಸಹಕಾರಿ ಸಂಸ್ಥೆಗಳ ಅಭಿವೃದ್ಧಿ ಮತ್ತು ಎದುರಿಸುತ್ತಿರುವ ಸವಾಲುಗಳ ಕುರಿತು ಸಮಗ್ರ ವಿವರ ನೀಡಿದರು.
ವಿಜಾಪುರ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘ ಹಾಗೂ ಸಹಕಾರಿ ಸಹಕಾರ ಒಕ್ಕೂಟದ ಅಧ್ಯಕ್ಷರಾಗಿರುವ ವಿಡಿಸಿಸಿ ನಿರ್ದೇಶಕರಾದ ಗುರುಶಾಂತ ನಿಡೋಣಿ ಅಧ್ಯಕ್ಷತೆ ವಹಿಸಿದ್ದರು.
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಸುರೇಶಗೌಡ ಬಿರಾದಾರ, ಎಸ್.ಎಸ್.ಜಾಗೀರದಾರ, ಶೇಖರ ದಳವಾಯಿ, ಸಿಇಒ ಎಸ್.ಎ.ಢವಳಗಿ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕತರಾದ ಶ್ರೀ ಶಾಂತೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಶ್ರೀಮಂತ ಇಂಡಿ, ವಿಡಿಸಿಸಿ ಹಿರಿಯ ಅಧಿಕಾರಿಗಳು ಸೇರಿದಂತೆ ಇತರರು ವೇದಿಕೆ ಮೇಲಿದ್ದರು.
ವಿಶ್ರಾಂತ ಪ್ರಾಚಾರ್ಯ ಬಸವರಾಜ ಸಾವಕಾರ ನಿರೂಪಿಸಿದರೆ, ವಿಡಿಸಿಸಿ ಉಪ ಪ್ರಧಾನ ವ್ಯವಸ್ಥಾಪಕರಾದ ಸತೀಶ ಪಾಟೀಲ ವಂದಿಸಿದರು.