ನಾವು – ನಮ್ಮ ಮಕ್ಕಳು(ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಕುರಿತ ಲೇಖನ ಮಾಲಿಕೆ – 05)
ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಬದುಕಿನಲ್ಲಿ ಬರುವ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ನಮಗೆ ಚರ್ಚೆ, ಮಾತುಕತೆ ಮತ್ತು ಸಮಾಲೋಚನೆಗಳ ಅವಶ್ಯಕತೆ ಇದೆ.
ಈ ಹಿಂದೆ ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಒಂದು ನೋಟ್ ಪುಸ್ತಕ ಬೇಕಾದರೆ ಅವರು ತಮ್ಮ ಪಾಲಕರಿಗೆ ಹೇಳುತ್ತಿದ್ದರು. ಹಾಗೆ ಹೇಳಿದೊಡನೆ ಪುಸ್ತಕ ಸಿಗುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇರಲಿಲ್ಲ. ಪಾಲಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆಯಲ್ಲಿ ಉಳಿದ ಹಿಂದಿನ ವರ್ಷದ ಪುಸ್ತಕಗಳಲ್ಲಿನ ಖಾಲಿ ಹಾಳೆಗಳನ್ನು ಹರಿದು ಅದರಿಂದಲೇ ಮತ್ತೊಂದು ನೋಟು ಪುಸ್ತಕವನ್ನು ತಯಾರಿಸಿ ಅದನ್ನು ಬಳಸಿಕೊಳ್ಳಲು ಹೇಳುತ್ತಿದ್ದರು.
ಯೂನಿಫಾರ್ಮ್ ಅಥವಾ ಸಮವಸ್ತ್ರದ್ದು ಕೂಡ ಇದೇ ಕಥೆ. ನಮಗೆ ಹೊಸ ಸಮವಸ್ತ್ರ ಬೇಕೆಂದು ನಾವು ಈ ವರ್ಷಕ್ಕೆ ಪಾಲಕರಲ್ಲಿ ಬೇಡಿಕೆ ಇಟ್ಟರೆ ಅದು ಮಾರ್ಚ್ ತಿಂಗಳಿನಲ್ಲಿಯೇ ಆಗಬೇಕಿತ್ತು. ಶಾಲೆಯ ರಜಾ ದಿನಗಳಲ್ಲಿ ನಮ್ಮ ಹಳೆಯ ಸಮವಸ್ತ್ರವನ್ನು ಪರಿಶೀಲಿಸಿ ಅದನ್ನು ರಿಪೇರಿ ಮಾಡಬಹುದಾದರೆ ಪಾಲಕರು ಅದರ ಹೊಲಿಗೆ ಬಿಚ್ಚಿ ದೊಡ್ಡದಾಗಿಸುವ ಇಲ್ಲವೇ ಇಲ್ಲವೇ ನಮ್ಮ ದೇಹದ ಅಳತೆಗೆ ಸರಿಹೊಂದುವ ರೀತಿಯಲ್ಲಿ ಸರಿ ಮಾಡಿ ಕೊಡುತ್ತಿದ್ದರು. ಇನ್ನು ಎಲ್ಲಾ ಹಬ್ಬಗಳಿಗೂ ಬಟ್ಟೆ ಕೊಡಿಸುವ ವಾಡಿಕೆಯಂತೂ ಇರಲೇ ಇಲ್ಲ.

ವರ್ಷಕ್ಕೆ ಒಂದು ಇಲ್ಲವೇ ಎರಡು ಜೊತೆ ಬಟ್ಟೆಯನ್ನು ಯಾವುದೋ ಒಂದು ಹಬ್ಬದಲ್ಲಿ ತಂದರೆ ಆಯಿತು. ಅದೂ ಮನೆಯಲ್ಲಿರುವ ಎಲ್ಲ ಮಕ್ಕಳಿಗೂ ಒಂದೇ ತಾನಿನಲ್ಲಿ ಹರಿಸಿ ತಂದು ಅವರವರ ಅಳತೆಗೆ ತಕ್ಕಂತೆ ಹೊಲಿಸಿ ಕೊಡುತ್ತಿದ್ದರು. ಬಟ್ಟೆಗಳನ್ನಾಗಲಿ ಸಮವಸ್ತ್ರಗಳನ್ನಾಗಲಿ ನಮ್ಮ ಆಯ್ಕೆಗೆ ಬಿಡುವುದು ರೂಢಿಯಲ್ಲಿಲ್ಲದ ಅಥವಾ ಆರ್ಥಿಕ ಪರಿಸ್ಥಿತಿ ಅದಕ್ಕೆ ಅನುವು ಮಾಡಿಕೊಡದ ಕಾಲಘಟ್ಟದಲ್ಲಿ ನಾವು ಇದ್ದೆವು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಮಕ್ಕಳು ನೋಟ್ ಪುಸ್ತಕ ಕೇಳಿದರೆ ಹಳೆಯದನ್ನೇ ಬಳಸಿಕೋ ಎಂದು ಹೇಳುವ ಹಾಗೆಯೇ ಇಲ್ಲ.. ಒಂದೆರಡು ಹೆಚ್ಚು ನೋಟ್ ಪುಸ್ತಕಗಳನ್ನು ಮುಂದೆ ಬೇಕಾಗಬಹುದು ಎಂದು ತಂದಿಟ್ಟಿರುವುದರಲ್ಲಿಯೇ ಮಕ್ಕಳಿಗೆ ಕೊಡಬೇಕಾದ ಪರಿಸ್ಥಿತಿ ಪಾಲಕರದ್ದು. ಇನ್ನು ಬಟ್ಟೆಗಳ ವಿಷಯಕ್ಕೆ ಬಂದರೆ ಮಕ್ಕಳು ಯಾವಾಗ ಬಟ್ಟೆಗಳನ್ನು ಖರೀದಿಸುತ್ತಾರೆ ಎಂಬುದೇ ಪಾಲಕರಿಗೆ ಗೊತ್ತಾಗದಷ್ಟು ಕಾಲ ಬದಲಾಗಿದೆ. ಆನ್ಲೈನ್ ನಲ್ಲಿ ಬಟ್ಟೆಗಳನ್ನು ತರಿಸುವ ಮಕ್ಕಳು ನಮ್ಮಲ್ಲಿದ್ದಾರೆ. ಡೆಲಿವರಿ ಬಾಯ್ ಮನೆಗೆ ಬಂದು ಸರ್ ನಿಮ್ಮದೊಂದು ಪಾರ್ಸಲ್ ಇದೆ ಎಂದು ಹೇಳಿದಾಗಲೇ ಮಕ್ಕಳು ಆನ್ಲೈನ್ ನಲ್ಲಿ ಏನನ್ನೋ ತರಿಸಿದ್ದಾರೆ ಎಂದು ಪಾಲಕರಿಗೆ ಗೊತ್ತಾಗುತ್ತದೆ.
ಈ ಹಿಂದಿನಂತೆ ಹಿರಿಯ ಮಕ್ಕಳ ನೋಟ್ ಪುಸ್ತಕಗಳನ್ನು ನಂತರದವರು ಬಳಸುವ ಸ್ಥಿತಿಗತಿಗಳು ಈಗಿಲ್ಲ ಮಕ್ಕಳಿಗೂ ಹೊಚ್ಚ ಹೊಸ ಪಠ್ಯ ಪುಸ್ತಕಗಳನ್ನೇ ಪಾಲಕರು ಕೊಡಿಸುತ್ತಿದ್ದಾರೆ. ಸಾಕಷ್ಟು ಬದಲಾವಣೆಗಳನ್ನು ನಾವು ಪ್ರಸ್ತುತ ಕಾಣುತ್ತಿದ್ದೇವೆ ಮತ್ತು ಈ ಬದಲಾವಣೆಗಳನ್ನು ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಒಪ್ಪಿಕೊಳ್ಳದೆ ಇದ್ದರೆ ಬದುಕಿನಲ್ಲಿ ನಾವು ಸಾಕಷ್ಟು ಹಿಂದೆ ಉಳಿಯುವ ಸಾಧ್ಯತೆಗಳು ಕೂಡ ನಮ್ಮ ಮುಂದಿವೆ.
ಈ ಹಿಂದೆ ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಬರಬೇಕು ಎಂದರೆ ನಮಗೆ ಕೊಡ ಮಾಡಿದ ಚೆಕ್ಕನ್ನು ಬರೆದುಕೊಂಡು ಹೋಗಿ ಅಲ್ಲಿ ಬ್ಯಾಂಕಿನವರು ಕೊಡುವ ಹಿತ್ತಾಳೆಯ ಟೋಕನ್ ಪಡೆದು ನಮ್ಮ ಪಾಳಿಗಾಗಿ ಕಾಯುತ್ತಾ ನಮ್ಮ ಜೊತೆ ಕುಳಿತಿರುವವರ ಪರಿಚಯ ಮಾಡಿಕೊಂಡು ಮಾತನಾಡುತ್ತಾ, ಹರಟೆ ಹೊಡೆಯುತ್ತಾ ಕೂಡಬೇಕಾಗಿತ್ತು. ಅದೆಷ್ಟೋ ಹೊತ್ತಿನ ನಂತರ ನಮ್ಮ ಪಾಳಿ ಬಂದಾಗ ನಾವು ನಮ್ಮ ಹಣವನ್ನು ಬಿಡಿಸಿಕೊಳ್ಳಬಹುದಾಗಿತ್ತು. ಆದರೆ ಈಗ ಹಾಗಿಲ್ಲ ಎಲ್ಲವೂ ಆನ್ಲೈನ್ ಆಗಿರುವ ಇಂದಿನ ದಿನಮಾನಗಳಲ್ಲಿ ನಾವು ಆನ್ಲೈನ್ ಮುಖಾಂತರ ನಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುತ್ತಿದ್ದೇವೆ. ಇದು ಒಂದು ರೀತಿಯ ಬದಲಾವಣೆ ಎಂದಾದರೆ ಈ ಬದಲಾವಣೆಯನ್ನು ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ನಮ್ಮೆದುರಿಗಿದೆ.
ಒಂದೇ ತಲೆಮಾರಿನ ಹಿಂದಿನ ನಾವುಗಳು ಶಾಲೆಗೆ ಹೋಗಬೇಕಾದರೆ ಅಮ್ಮ ಕೊಟ್ಟ ಊಟದ ಡಬ್ಬಿಯನ್ನು ಪಡೆದುಕೊಂಡು ನಡೆದು ಶಾಲೆಯನ್ನು ತಲುಪುತ್ತಿದ್ದೆವು. ಶಾಲೆ ಆರಂಭವಾಗುವ ಅರ್ಧ ಮುಕ್ಕಾಲು ಗಂಟೆ ಮೊದಲೇ ಶಾಲೆಯನ್ನು ತಲುಪಿ ಶಾಲೆ ಆರಂಭದ ಬೆಲ್ ಹೊಡೆಯುವವರೆಗೆ ಆಟದಲ್ಲಿ ತೊಡಗಿಕೊಳ್ಳುತ್ತಿದ್ದೆವು. ಆದರೆ ಇದೀಗ ನಮ್ಮ ಮಕ್ಕಳು ಶಾಲೆಯ ಬಸ್ಸುಗಳಲ್ಲಿ ಆಟೋರಿಕ್ಷಾಗಳಲ್ಲಿ ಶಾಲೆಯನ್ನು ತಲುಪುತ್ತಾರೆ. ಈ ಬದಲಾವಣೆಯನ್ನು ನಾವು ಒಪ್ಪಿಕೊಳ್ಳಲೇಬೇಕು.

ನಾವು ಶಾಲೆಗೆ ಸೈಕಲ್ ನಲ್ಲಿ ಹೋಗುತ್ತಿದ್ದೆವು ಇವರಿಗಾದರೆ ಎಷ್ಟೆಲ್ಲಾ ಅನುಕೂಲತೆಗಳು ಇವೆ ಎಂದು ಅನ್ನಲಾಗುವುದಿಲ್ಲ.. ಬದಲಾವಣೆಗೆ ನಾವು ಸಹಜವಾಗಿಯೇ ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಇನ್ನೇನು ನಿವೃತ್ತಿಯ ವಯಸ್ಸಾಯ್ತು , ಹೊಸತನ್ನು ಕಲಿಯುವ ಉತ್ಸಾಹವಿಲ್ಲ ಎಂದು ಸುಮ್ಮನಾಗದೆ ಬದುಕಿನ ಎಲ್ಲ ಬದಲಾವಣೆಗಳಿಗೆ ನಮ್ಮನ್ನು ನಾವು ಒಡ್ಡಿಕೊಂಡು ಬದುಕಿನಲ್ಲಿ ಮುಂದೆ ಸಾಗಬೇಕು ಬದಲಾವಣೆಯೇ ನಮ್ಮ ಬೆಳವಣಿಗೆಗೆ ಪೂರಕವಾಗಬೇಕು.
ಬದುಕಿನಲ್ಲಿ ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕು ಆದರೆ ಎಷ್ಟರಮಟ್ಟಿಗೆ?
ನಿಜ, ಮನೆಯಲ್ಲಿ ನಮಗೆ ಬೇಕಾದ ತಿಂಡಿ ದೊರೆಯದೆ ಇದ್ದರೂ ಬೇರೊಂದು ತಿಂಡಿ ತಿಂದು ಹೊಟ್ಟೆ ತುಂಬಿಸಿಕೊಳ್ಳಬಹುದು. ಹೋಟೆಲಿಗೆ ಹೋದಾಗಲೂ ಅಷ್ಟೇ ನಾವು ಬಯಸದ ತಿಂಡಿ ಅಲ್ಲಿ ಖಾಲಿಯಾಗಿದ್ದರೆ ಇರುವುದರಲ್ಲಿಯೇ ಯಾವುದಾದರು ಒಂದನ್ನು ಆರಿಸಿ ತಿನ್ನಬೇಕಾದಂತಹ ಪರಿಸ್ಥಿತಿ ನಮ್ಮದಾಗಬಹುದು, ನಮಗೆ ಬೇಕಾದ ಶರ್ಟು ಇಲ್ಲವೇ ಪ್ಯಾಂಟು ಇಸ್ತ್ರೀ ಆಗಿರದಿದ್ದರೆ ನಾವು ಅನಿವಾರ್ಯವಾಗಿ ಬೇರೊಂದು ಇಸ್ತ್ರಿ ಆದ ಬಟ್ಟೆಯನ್ನು ತೊಡಬಹುದು. ಸೀರೆಯಾದರೂ ಅಷ್ಟೇ.. ಆದರೆ ಯಾವುದೇ ರೀತಿಯ ಪರ್ಯಾಯ ಇಲ್ಲದೆ ಇರುವ ಎರಡು ವಿಷಯಗಳು ಎಂದರೆ ವ್ಯಾಯಾಮ ಮತ್ತು ಓದು.
ನಮ್ಮ ಮನೋ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಅತ್ಯವಶ್ಯಕ. ನನ್ನ ಬದಲು ಬೇರೆಯವರು ವ್ಯಾಯಾಮ ಮಾಡಿದರೆ ನಡೆಯುತ್ತದೆ ಎಂದು ಹೇಳುವ ಹಾಗಿಲ್ಲ. ನಮ್ಮ ದೇಹಕ್ಕೆ ಅತ್ಯವಶ್ಯಕವಾದ ವ್ಯಾಯಾಮವನ್ನು ನಾವು ಮಾತ್ರ ಮಾಡಬೇಕು ಅಂತೆಯೇ ಓದು ಕೂಡ. ನಮ್ಮ ಬದುಕಿನಲ್ಲಿ ನಾವು ಹೆಚ್ಚಿನ ಅವಕಾಶಗಳನ್ನು ಪಡೆಯಲು ಉತ್ತಮ ಅಂಕಗಳನ್ನು ಗಳಿಸಲು ಒಳ್ಳೆಯ ಜ್ಞಾನವನ್ನು ಹೊಂದಲು ಓದಿಗೆ ಓದು ಮಾತ್ರ ಪರ್ಯಾಯ.. ಬೇರಾವುದೂ ಅಲ್ಲ.
ಯಾವ ಯಾವ ವಿಷಯಗಳಲ್ಲಿ ಪರ್ಯಾಯ ವ್ಯವಸ್ಥೆ ಸಾಧ್ಯವಿಲ್ಲ ಎಂಬುದರ ಸ್ಪಷ್ಟ ಅರಿವನ್ನು ಮಕ್ಕಳಿಗೆ ಮೂಡಿಸಬೇಕಾದದ್ದು ಪಾಲಕರ ಕರ್ತವ್ಯ. ಯಾವುದೇ ಒಂದು ವಿಷಯವನ್ನು ಮಕ್ಕಳಿಗೆ ಕಲಿಸುವ ಮುನ್ನ ಶಾಲೆಯ ಶಿಕ್ಷಕರಿಗೆ ಪೂರ್ವಭಾವಿ ತಯಾರಿಯ ತರಬೇತಿ ನೀಡುತ್ತಾರೆ ಇದು ಅವಶ್ಯಕ.
ಯಾವುದೇ ಒಂದು ಹೊಸ ಬದಲಾವಣೆಯನ್ನು ಮಕ್ಕಳು ಎದುರಿಸಬೇಕು ಎನ್ನುವುದಾದರೆ ಆ ವಿಷಯವನ್ನು ಮಕ್ಕಳಿಗೆ ಮೊದಲೇ ಮನದಟ್ಟು ಮಾಡಿಸುವುದು ಅತ್ಯವಶ್ಯಕ.
ಒಮ್ಮಿಂದೊಮ್ಮೆಲೆ ಹೊಸ ಬದಲಾವಣೆಗೆ ಒಗ್ಗಿಕೊಳ್ಳುವುದು ಮಕ್ಕಳಿಗೆ ಕಷ್ಟ ಸಾಧ್ಯ. ಅದರ ಬದಲಾಗಿ ಮಕ್ಕಳಿಗೆ ಆ ವಿಷಯದ ಕುರಿತು ಮೊದಲ ತಿಳುವಳಿಕೆಯನ್ನು ಹೇಳಿ ಮಾತನಾಡಿದರೆ ಮಕ್ಕಳು ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳುವುದಲ್ಲದೆ ಆ ಬದಲಾವಣೆಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಾರೆ, ಅವರಲ್ಲಿ ಸಂಯಮ ಮತ್ತು ತಾಳ್ಮೆಗಳು ಒಡಮೂಡುತ್ತವೆ. ಆಗ ಮಕ್ಕಳಲ್ಲಿ ಉಂಟಾಗುವ ಸೂಕ್ಷ್ಮ ಮತ್ತು ಸೂಕ್ತವಾದ ಬದಲಾವಣೆಗಳನ್ನು ನಾವು ಗಮನಿಸಬಹುದು.
ಕೇವಲ ಮಕ್ಕಳಿಗೆ ವ್ಯಾಯಾಮ ಮಾಡಿ ದಿನಚರಿಯನ್ನು ರೂಡಿಸಿಕೊಳ್ಳಿ ಎಂದು ಹೇಳುವ ಬದಲು ಪಾಲಕರು ತಾವು ಕೂಡ ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಮಕ್ಕಳು ಪಾಲಕರನ್ನು ಅನುಸರಿಸುತ್ತಾರೆ. ಪಾಲಕರ ದಿನಚರಿಗಳನ್ನು ನೋಡುವ ಮಕ್ಕಳು ತಾವು ಕೂಡ ತಮ್ಮ ಬದುಕಿನಲ್ಲಿ ಉತ್ತಮ ಆರೋಗ್ಯವನ್ನು ಪಡೆಯಲು ವ್ಯಾಯಾಮ ಮತ್ತು ದಿನಚರಿಗಳು ಎಷ್ಟು ಅವಶ್ಯಕ ಎಂಬುದನ್ನು ಅರಿಯುತ್ತಾರೆ.
ಯಾವುದೇ ಬದಲಾವಣೆಯನ್ನು ನಮ್ಮ ಮಕ್ಕಳಲ್ಲಿ ತರಬೇಕು ಎಂದು ಬಯಸುವ ಪಾಲಕರು ಮೊದಲು ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಉದಾಹರಣೆಗೆ ಪರೀಕ್ಷೆಯ ಸಮಯದಲ್ಲಿ ಮಕ್ಕಳು ದೂರದರ್ಶನದ ಕಾರ್ಯಕ್ರಮಗಳನ್ನು ವೀಕ್ಷಿಸಬಾರದು ಎಂದು ಬಯಸುವ ಪಾಲಕರು ಮನೆಯಲ್ಲಿ ಟಿವಿ ಬಂದ್ ಮಾಡೋಣ ಎಂದು ಒಮ್ಮಿಂದೊಮ್ಮೆಲೆ ಮಕ್ಕಳಿಗೆ ಹೇಳಿದರೆ ಮಕ್ಕಳು ಬೇಸರಪಟ್ಟುಕೊಳ್ಳಬಹುದು ಸಿಟ್ಟಿಗೇಳಬಹುದು, ಆದ್ದರಿಂದ ಪಾಲಕರು ಮಕ್ಕಳಿಗೆ ಈ ವಿಷಯವನ್ನು ಹೇಳುವ ಮುನ್ನ ಮೊದಲು ಕೆಲವು ದಿನಗಳ ಕಾಲ ತಾವು ಟಿವಿ ನೋಡುವುದನ್ನು ನಿಲ್ಲಿಸಬೇಕು. ಕೆಲ ದಿನಗಳ ಮಟ್ಟಿಗೆ ತಾವು ಟಿವಿ ನೋಡುವುದನ್ನು ನಿಲ್ಲಿಸುವುದು ಸಾಧ್ಯವಾದ ಮಾತ್ರ ತಮ್ಮ ಮಕ್ಕಳಿಗೆ ಈ ವಿಷಯವನ್ನು ಮನದಟ್ಟು ಮಾಡಿಸಲು ಸಾಧ್ಯವಾಗುತ್ತದೆ. ಆಗ ಮಾತ್ರ ಮಕ್ಕಳು ಹೊಸ ವಿಷಯಕ್ಕೆ ಹೊಂದಿಕೊಳ್ಳಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಪಾಲಕರ ಪ್ರಯತ್ನ ಅತ್ಯಗತ್ಯ.
