ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಿಥಿಲಗೊಂಡ ತಾಲೂಕಿನ ದೇವಣಗಾಂವ ಸೇತುವೆಗೆ ಶೀಘ್ರದಲ್ಲೇ ದುರಸ್ತಿ ಕಾಮಗಾರಿ ಕೈಗೊಳ್ಳಲಿದ್ದೇವೆ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.
ಇತ್ತೀಚೆಗೆ ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಹಾಗೂ ಸಿಂದಗಿ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿದ್ದರು. ದೇವಣಗಾಂವ ಸೇತುವೆಯಲ್ಲಿ ಗುಂಡಿಗಳು ಬಿದ್ದು ಸಂಪರ್ಕ ಕಷ್ಟವಾಗಿದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸೇತುವೆ ಸಬಲೀಕರಣಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡಲು ಸಮ್ಮತಿ ಸೂಚಿಸಿದ್ದು, ಶೀಘ್ರದಲ್ಲೇ ಸೇತುವೆ ದುರಸ್ತಿ ಕಾಮಗಾರಿ ಕೈಗೊಳ್ಳಲಿದ್ದೇವೆ ಎಂದು ಶಾಸಕ ಅಶೋಕ ಮನಗೂಳಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಪಾರ ಪ್ರಮಾಣದಲ್ಲಿ ಇತ್ತಿಚೆಗೆ ಸುರಿದ ಮಳೆಯಿಂದಾಗಿ ಸಿಂದಗಿ ಮತಕ್ಷೇತ್ರದ ಔರಾದ ಸದಾಶಿವಗಡ್ ರಾಜ್ಯ ಹೆದ್ದಾರಿ ೩೪ರಲ್ಲಿ ಬರುವ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯಲ್ಲಿ ಗುಂಡಿಗಳು ಬಿದ್ದು ಹಾಳಾಗಿದ್ದು, ಇದರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ರೂ.೩ ಕೋಟಿ ಅನುದಾನ ಬಿಡುಗಡೆಗೊಳಿಸಲು ಮುಂದಾಗಿದೆ. ಸೇತುವೆ ದುರಸ್ತಿ ಬಗ್ಗೆ ಸಚಿವರ ಗಮನಕ್ಕೂ ಶಾಸಕರು ತೆಗೆದುಕೊಂಡು ಬಂದಿದ್ದರು. ಅದರಂತೆ ಇದೀಗ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ.