ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕ್ರೀಡೆಗಳು ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕ್ರೀಡಾಭಿಮಾನಿಗಳ ಬಳಗ ಹಾಗೂ ಸ್ನೇಹಿತರಿಂದ ಆರ್ಥಿಕ ಸಹಾಯ ಮತ್ತು ತಾಲೂಕು ಆಡಳಿತ ವತಿಯಿಂದ ತನು,ಮನ, ಧನದಿಂದ ಸಹಾಯ-ಸಹಕಾರ ನೀಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಹೊರವಲಯ ಕಲಕೇರಿ ರಸ್ತೆಯಲ್ಲಿರುವ ಎಲೈಟ್ ಪಪೂ ಕಾಲೇಜಿನಲ್ಲಿ ಶಾಲಾ ಶಿಕ್ಷಣ(ಪದವಿಪೂರ್ವ) ಇಲಾಖೆ ಹಮ್ಮಿಕೊಂಡ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ನಗರದಲ್ಲಿ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಜರಗುತ್ತಿರುವುದು ಹೆಮ್ಮೆಯ ಸಂಗತಿ. ಪಂದ್ಯಾವಳಿ ಯಶಸ್ಸಿಗಾಗಿ ಸಹಕಾರ ನೀಡುತ್ತೇನೆ. ನಮ್ಮ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ವತಿಯಿಂದ ಕುಸ್ತಿ ಪಟುಗಳು ಸೇರಿದಂತೆ ಎಲ್ಲರಿಗೂ ಮೂರು ದಿನಗಳ ಕಾಲ ಉಪಹಾರ, ಊಟದ ವ್ಯವಸ್ಥೆ ಮಾಡುತ್ತೇನೆ ಎಂದು ಶಾಸಕ ಭರವಸೆ ನೀಡಿದರು.
ಈ ವೇಳೆ ವಿಜಯಪುರ ಜಿಲ್ಲಾ ದೈಹಿಕ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಶಾಂತು ದುರ್ಗಿ ಪ್ರಾಸ್ತಾವಿಕ ಮಾತನಾಡಿ, ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಪದವಿ-ಪೂರ್ವ ಕಾಲೇಜುಗಳಿಂದ ೯೦೦ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪಪೂ ಇಲಾಖೆ ಶಾಖಾಧಿಕಾರಿ ಪ್ರಕಾಶ ಗೊಂಗಡಿ ಮಾತನಾಡಿ, ಸಿಂದಗಿ ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಅಂಗ ಸಂಸ್ಥೆಯಾದ ಎಚ್.ಜಿ ಪಪೂ ಕಾಲೇಜು ಮೈದಾನದಲ್ಲಿ ಅ.೨೩, ೨೪ ಮತ್ತು ೨೫ ಮೂರು ದಿನಗಳ ಕಾಲ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಈ ಸಮಾರಂಭದಲ್ಲಿ ಜಿಲ್ಲಾ ಸಚಿವರು, ಶಿಕ್ಷಣ ಸಚಿವರನ್ನು ಆಹ್ವಾನ ಮಾಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ(ಪದವಿಪೂರ್ವ) ಇಲಾಖೆ ಹಾಗೂ ಎಲೈಟ್ ಪಪೂ ಕಾಲೇಜು ವತಿಯಿಂದ ಶಾಸಕ ಅಶೋಕ ಮನಗೂಳಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ ಎಲೈಟ್ ಸಂಸ್ಥೆಯ ಸಂಸ್ಥಾಪಕ ಮಹಿಬೂಬ ಅಸಂತಾಪುರ, ವಿಜಯಪುರ ಜಿಲ್ಲಾ ಪ್ರಾಚಾರ್ಯರ ಮಹಾಮಂಡಳ ಅಧ್ಯಕ್ಷ ಕೆ.ಆಯ್.ಉಪ್ಪಾರ, ಪಪೂ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಡಿ.ಹೆಬ್ಬಿ, ಪ್ರಾಚಾರ್ಯರಾದ ಕೆ.ಜಿ.ಲಮಾಣಿ, ಎಲ್.ಆಯ್.ಹುನಶಿಕಟ್ಟಿ, ಬಿ.ಡಿ.ದೋಟಿಹಾಳ, ಭೀಮನಗೌಡ ಸಿಂಗನಳ್ಳಿ, ಎ.ಆರ್.ಹೆಗ್ಗನದೊಡ್ಡಿ, ಇಜಾಜ ಜುಮನಾಳ, ಸತೀಶ ಬಸರಕೋಡ, ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಕೆ.ಎಚ್.ಸೋಮಾಪುರ ಸೇರಿದಂತೆ ಅನೇಕರು ಇದ್ದರು.