ಕಾಮಗಾರಿ ಸ್ಥಳಕ್ಕೆ ರಾಜ್ಯ ಕೈಗಾರಿಕಾ & ಮೂಲಸೌಲಭ್ಯ ಅಭಿವೃದ್ದಿ ನಿಗಮ ಎಂ ಡಿ ಡಾ.ರವಿ ಭೇಟಿ
ವಿಜಯಪುರ: ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ಶುಕ್ರವಾರ ವಿಜಯಪುರ ವಿಮಾನ ನಿಲ್ದಾಣ ಯೋಜನೆಯ ಕಾಮಗಾರಿಗಳ ವೀಕ್ಷಣೆ ಮಾಡಿ, ಪ್ರಗತಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಶೇ.೯೦ರಷ್ಟು ಪೂರ್ಣಗೊಂಡು ಸಾಕಷ್ಟು ಕಾಮಗಾರಿಗಳು ಕೊನೆಯ ಹಂತ ತಲುಪಿವೆ. ಕಾಮಗಾರಿಗಳಿಗೆ ಸಂಬಂಧಿಸಿದಂತೆ ಉಪಕರಣಗಳ ಅನುಷ್ಠಾನ ಮತ್ತು ಕಾರ್ಯಾಚರಣೆ ಮುಖ್ಯವಾಗಿದ್ದು, ನವೆಂಬರ್ ತಿಂಗಳಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂಬ ಅಧಿಸೂಚನೆ ಹಿನ್ನಲೆಯಲ್ಲಿ ಕಾಮಗಾರಿಗಳಿಗೆ ತೀವ್ರಗತಿ ನೀಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಹೊಸ ಹೊಸ ಉಪಕರಣಗಳ ಸ್ಥಾಪನೆಗೆ ಕಾಲಾವಧಿ ತೆಗೆದುಕೊಳ್ಳಲಾಗಿದೆ. ಟೆಂಡರ್‌ಗಳಿಗೆ ಆದೇಶ ಹೊರಡಿಸಲಾಗಿದ್ದು, ಆದಷ್ಟು ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.
ಖಾತೆಯ ಸಚಿವರ ತಾಂತ್ರಿಕ ಸಲಹೆಗಾರರಾದ ಪ್ರೊ ಅರವಿಂದ ಗಲಗಲಿ, ಎವಿಯೇಶನ್ ಅಡ್ವೈಸರ್ ಬ್ರಿಗೇಡಿಯರ್ ಡಿ.ಎಂ.ಪೂರ್ವಿಮಠ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಖಾತೆಯ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ, ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರರಾದ ರಾಜು ಮುಜುಂದಾರ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

