ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರದ ಗ್ರಾಮೀಣ ಅಭಿವೃದ್ದಿ ಸಂಸ್ಥೆಯು ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ವಿವಿಧ ಜಾತಿಯ ಅರಣ್ಯ, ತೋಟಗಾರಿಕೆ ಹಾಗೂ ಇತರೆ ಸಸಿಗಳನ್ನು ನೆಟ್ಟಿರುವ ರೈತರಿಗೆ ಕಾರ್ಬನ್ ಕ್ರೆಡಿಟ್ ಕಾರ್ಯಕ್ರಮದಡಿ ಪ್ರೋತ್ಸಾಹ ಧನಕ್ಕಾಗಿ ಆಸಕ್ತ ರೈತರಿಂದ ಆರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಸಂಸ್ಥೆ (IRD) ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಡಾ.ಬಾಬು ಸಜ್ಜನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ವಿವಿಧ ಜಾತಿಯ ತೆಂಗು, ದಾಳಿಂಬೆ, ಸಾಗುವಾನಿ, ಮಹಾಗಣಿ, ಶ್ರೀಗಂಧ, ಬೇವು, ಮಾವು, ಪೇರು, ನುಗ್ಗೆ, ನೇರಳೆ, ಹಲಸು, ಬಾರಿ, ನಿಂಬೆ, ಹುಣಸೆ, ನೆಲ್ಲಿ, ಗೋಡಂಬಿ, ಸೀತಾಫಲ, ಬೆಣ್ಣೆಹಣ್ಣು, ಎಣ್ಣೆ ಪಾಮ ಮುಂತಾದ ತೋಟಗಾರಿಕೆ ಮತ್ತು ಇತರೆ ಸಸಿಗಳನ್ನು ನೆಟ್ಟಿರುವ ರೈತರಿಗೆ ಪ್ರೋತ್ಸಾಹಿಸಲು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ವರಾಹ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ರೈತರಿಗೆ ಪ್ರೋತ್ಸಾಹ ಧನ ನೀಡುವ ಕಾರ್ಬನ್ ಕ್ರೇಡಿಟ್ ಕಾರ್ಯಕ್ರಮದಡಿ ವಿಜಯಪುರ ಜಿಲ್ಲೆ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ಪ್ರೋತ್ಸಾಹ ಧನ ಪಡೆಯಲಿಚ್ಚಿಸುವ ಆಸಕ್ತ ರೈತರು ಮೇಲಿನ ಸಸಿಗಳು 2020 ನಂತರ ಮಾತ್ರ ನೆಟ್ಟ ಸಸಿಗಳಾಗಿರಬೇಕು. ಸಸಿಗಳನ್ನು ನೆಟ್ಟ ಸ್ಥಳದಲ್ಲಿ ಕಳೆದ 15 ವರ್ಷಗಳಲ್ಲಿ ಅರಣ್ಯ, ಸಸಿ, ಮರಗಳನ್ನು ಕಡಿದಿರಬಾರದು ಅಥವಾ ನಾಶ ಮಾಡಿರಬಾರದು.
ವಿಜಯಪುರ ಜಿಲ್ಲೆಯಲ್ಲಿ ಕಾರ್ಬನ್ ಕ್ರೆಡಿಟ್ ಕಾರ್ಯಕ್ರಮದಡಿ ಪ್ರೋತ್ಸಾಹ ಧನ ಪಡೆದುಕೊಳ್ಳಲು ಇಚ್ಚಿಸುವ ರೈತರು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಅಭಿವೃದ್ದಿ ಸಂಸ್ಥೆ, ಪ್ಲಾಟ ನಂ.03, ಬಸವ ನಿಲಯ, ಸದಾಶಿವನಗರ, ಬಾಗಲಕೋಟ-ಬಾಗೇವಾಡಿ ರಿಂಗ ರಸ್ತೆ, ವಿಜಯಪುರ-586109. ಈ ವಿಳಾಸಕ್ಕೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಖುದ್ಧು ಭೇಟಿ ನೀಡಿ ಮಾಹಿತಿ ಪಡೆಯುವಂತೆ ಕೋರಲಾಗಿದೆ. ಸದರಿ ಯೋಜನೆಯಡಿ ಅರ್ಜಿಗಾಗಿ ಮತ್ತು ಯಾವುದೇ ಕೆಲಸಕ್ಕೆ ರೈತರು ಯಾರಿಗೂ ಹಣ ಕೊಡುವ ಅವಶ್ಯಕತೆ ಇಲ್ಲ ಮತ್ತು ಅದಕ್ಕೆ ನಮ್ಮ ಸಂಸ್ಥೆ ಜವಾಬ್ದಾರಿ ಆಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.