ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ ಡಾ. ಎಲ್.ಮೂರ್ತಿ ಸ್ಥಾಪಿತ ಜಿಲ್ಲಾ ಸಮಿತಿ) ವತಿಯಿಂದ ಡಾ. ಅಂಬೇಢ್ಕರ ವೃತ್ತದಿಂದ ಬೃಹತ್ ಪ್ರತಿಭಟನೆ ಮುಖಾಂತರ ೫೯ ಅಲೆಮಾರಿಗಳಿಗೆ ಶೇ. ೧ರಷ್ಟು ಪ್ರತ್ಯೇಕ ಮೀಸಲಾತಿ ನೀಡಲು ಆಗ್ರಹಿಸಿ ಜಿಲ್ಲಾಧಿಕಾರಿಗಳಾದ ಡಾ. ಆನಂದ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಕರೆಕಲ್ಲ, ಪ್ರಧಾನ ಕಾರ್ಯದರ್ಶಿ ಶರಣು ದೊಡಮನಿ ಮಾತನಾಡಿ, ೧೦೧ ಪರಿಶಿಷ್ಟರ ಮೀಸಲಾತಿ ವರ್ಗೀಕರಿಸಲು ಆಗ್ರಹಿಸಿ ರಾಜ್ಯದಲ್ಲಿ ಕಳೆದ ೩೫ ವರ್ಷಗಳಿಂದ ಹೋರಾಟ ನಡೆಸಲಾಗಿದೆ. ೫೯ ಅಲೆಮಾರಿ ಜಾತಿಗಳಿಗೆ ಕೂಡಲೇ ಶೇ. ೧ ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಆದಿ ಕರ್ನಾಟಕ. ಆದಿ ಆಂಧ್ರ ಮತ್ತು ಆದಿದ್ರಾವಿಡ ಜಾತಿಗಳ ಮೂಲ ಜಾತಿಗಳನ್ನು ಗುರುತಿಸಿ ಆಯಾ ಪ್ರವರ್ಗಕ್ಕೆ ಸೇರಿಸುವ ಮೂಲಕ ಗೊಂದಲ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಕಂದಾಯ ಇಲಾಖೆಯಲ್ಲಿ ೧೦ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ೧೨ ಸಾವಿರ ಗ್ರಾಮ ಸಹಾಯಕರನ್ನು ಖಾಯಂ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೀರಭದ್ರಪ್ಪ ಹಾಲಂಬಿ ಮಾಜಿ ಶಾಸಕರು, ಯಮನಪ್ಪ ಮ್ಯಾಗೇರಿ ತಾಲೂಕಾ ಅಧ್ಯಕ್ಷ ಬಾಗೇವಾಡಿ, ಶ್ರೀನಾಥ ಭೈರವಾಡಗಿ ತಾ. ಅಧ್ಯಕ್ಷ ನಿಡಗುಂದಿ ಭೀಮರಾಯ ಜಿಗಜಿಣಗಿ, ಕಿಟ್ಟು ಆದ್ವಾನಿ, ಸಂಗಮೇಶ ಮಾದರ, ವೆಂಕಟೇಶ ಹೂಹಿಪ್ಪರಗಿ. ದ್ಯಾವಪ್ಪ ಇಂಗಳೇಶ್ವರ, ಅಶೋಕ ನಡುವಿನಮನಿ, ಭೀಮಾಶಂಕರ ವಿಭೂತಿ, ಉಮೇಶಕುಮಾರ ವಿಭೂತಿ, ಲಕ್ಷ್ಮಣ ವಿಭೂತಿ, ಕೆ.ಎಚ್. ಪರಿಯವರ, ಸುಭಾಸ ಹಾವಿನವರ, ಗೌಡಪ್ಪ ಬಡಿಗೇರ, ಅಕ್ಷಯ ಆಲಮಟ್ಟಿ, ಮಾರುತಿ ತಡವಲಗಿ ಮತ್ತಿತರು ಉಪಸ್ಥಿತರಿದ್ದರು.