ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೀನುಗಾರಿಕೆ ಮಹಿಳೆಯರಿಗೆ ಒಂದು ಆದಾಯ ತರುವ ಉದ್ಯೋಗವಾಗಿದ್ದು, ಮೀನು ಪೌಷ್ಟಿಕಾಂಶಗಳ ಆಹಾರದ ಮೂಲವಾಗಿದೆ ಎಂದು ಇಂಗ್ಲೆಂಡಿನ ಖ್ಯಾತ ಮಿದುಳು ರಕ್ತನಾಳ ತಜ್ಞ ಡಾ. ಶುಜಾ ಪುಣೇಕರ ಅಭಿಪ್ರಾಯ ಪಟ್ಟರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಸಿಕ್ಯಾಬ್ ಎ.ಆರ್.ಎಸ್ ಇನಾಮ್‌ದಾರ ಮಹಿಳಾ ಮಹಾವಿದ್ಯಾಲಯ ವಿಜಯಪುರ ಇವರ ಸಹಯೋಗದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ‘ಪ್ರಧಾನಮಂತ್ರಿ ಉಚ್ಛಶಿಕ್ಷಾ ಅಭಿಯಾನ ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ‘ಮಹಿಳೆಯರಿಗೆ ಮೀನುಗಾರಿಕೆ ಕೌಶಲ್ಯಗಳು’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮೀನು ಪ್ರೋಟೀನ್ ಘಟಕದ ಮೂಲ ಆಹಾರ ಆಕಾರವಾಗಿದ್ದು, ಶುದ್ಧ ನೀರು ಹಾಗೂ ಸಾಗರೋತ್ಪನ್ನಗಳಲ್ಲಿ ಪ್ರಮುಖವಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿಕ್ಯಾಬ್ ಎ.ಆರ್.ಎಸ್.ಆಯ್ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ರಿಯಾಜ್ ಫಾರೂಕ್ ಮಾತನಾಡಿ, ಮೀನುಗಾರಿಕೆ ಒಂದು ಉದ್ಯೋಗದ ಜೊತೆಗೆ ಆದಾಯವನ್ನು ತಂದುಕೊಡುವ ಉತ್ತಮ ವೃತ್ತಿಯಾಗಿದೆ. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಒಳನಾಡು ಮೀನುಗಾರಿಕೆ ಪರಿಣಾಮಕಾರಿಯಾದ ಕ್ರಮವಾಗಿದೆ ಎಂದರು.
ಕಾರ್ಯಾಗಾರದಲ್ಲಿ ಡಾ.ವಿಜಯಕುಮಾರ ‘ಗ್ರಾಮ ಪಂಚಾಯತಿ ಹಾಗೂ ಮತ್ಸ್ಯ ಸಂಜೀವಿನಿ’ ಯೋಜನೆ ಕುರಿತು ವಿವರಿಸಿದರು. ಡಾ.ಹರಿಶ್ಚಂದ್ರ ಜಾಧವ ‘ಉತ್ತರ ಕರ್ನಾಟಕದಲ್ಲಿ ಮೀನುಗಾರಿಕೆ’ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಭೂತನಾಳ ಮೀನು ಸಂಶೋಧನೆ ಹಾಗೂ ಮಾಹಿತಿ ಕೇಂದ್ರದ ರವಿಕುಮಾರ ಡಿ ಮೋದಿ ‘ಮೀನುಗಾರಿಕೆ ಸಹಕಾರಿ ಸಂಸ್ಥೆಗಳು ಹಾಗೂ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕುರಿತು ಮಾತನಾಡಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಜಾಯ್ ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಾಗಾರದ ರೂಪುರೇಷೆಗಳನ್ನು ವಿವರಿಸಿದರು.
ಕಾರ್ಯಾಗಾರದಲ್ಲಿ ಕಾಲೇಜಿನ ಉಪಪ್ರಾಚಾರ್ಯ ಡಾ. ಹಾಜಿರಾ ಫರವೀನ್, ಕಾಲೇಜಿನ ಪ್ರಾಧ್ಯಾಪಕರು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಜೈವಿಕ ಮಾಹಿತಿ ಅಧ್ಯಯನ ವಿಭಾಗದ ಸಂಶೋಧನಾ ವಿಧ್ಯಾರ್ಥಿನಿಯರು, ಕಾಲೇಜಿನ ವಿಧ್ಯಾರ್ಥಿನಿಯರು, ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಕೆ.ಯಡಹಳ್ಳಿ ಸ್ವಾಗತಿಸಿ ಪರಿಚಯಿಸಿದರು. ಪ್ರೊ.ಶಬೀನಾ ಪಟೇಲ್ ನಿರೂಪಿಸಿದರು. ಪ್ರಾಣಿಶಾಸ್ತç ವಿಭಾಗದ ಮುಖ್ಯಸ್ಥ ಡಾ. ಗಿರೀಶ್ ಲೆಂಡಿ ವಂದಿಸಿದರು.