ಹತ್ಯೆಗೀಡಾದ ಭೀಮನಗೌಡ ಬಿರಾದಾರ ಕುಟುಂಬಕ್ಕೆ ಜೀವ ಭಯ | ಚಡಚಣ ರಾಜ್ಯ ಹೆದ್ದಾರಿ ಬಂದ್ | ಸಂಚಾರ ಅಸ್ತವ್ಯಸ್ತ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಸೆ.೩ ರಂದು ದುಷ್ಕರ್ಮಿಗಳಿಂದ ಗುಂಡಿಗೆ ಬಲಿಯಾಗಿದ್ದ ದೇವರನಿಂಬರಗಿ ಗ್ರಾಮದ ಭೀಮನಗೌಡ ಬಿರಾದಾರ ಎಂಬುವರ ಅಪ್ರಾಪ್ತ ಪುತ್ರನ (೨ವರ್ಷದ) ಅಪಹರಣಕ್ಕೆ ಗುರುವಾರ ಸಂಜೆ ದೇವರನಿಂಬರಗಿ ಭೀಮನಗೌಡ ಬಿರಾದಾರ ತೋಟದ ನಿವಾಸದ ಬಳಿ ವಿಫಲಯತ್ನ ನಡೆದಿದ್ದು, ಈ ಬಗ್ಗೆ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮೂಡಿದೆ.
ಹತ್ಯೆಗೀಡಾದ ದೇವರ ನಿಂಬರಗಿ (ಮಾಜಿ) ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪ್ರಭಾವಿ ಕಾಂಗ್ರೆಸ್ ಮುಖಂಡ ಭೀಮನಗೌಡ ಬಿರಾದಾರ ಕುಟುಂಬ ಜೀವ ಭಯದಲ್ಲಿದ್ದು, ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ದೇವರ ನಿಂಬರಗಿಯ ನೂರಾರು ಜನ ಗ್ರಾಮಸ್ಥರು ಚಡಚಣದ ಹರಳಯ್ಯ ವೃತ್ತದಲ್ಲಿ ಗುರುವಾರ ರಾತ್ರಿ ಸುಮಾರು ೧೦.೩೦ ಗಂಟೆಗೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ದೇವರನಿಂಬರಗಿ ಗ್ರಾಮದಲ್ಲಿ ಭೀಮನಗೌಡ ಬಿರಾದಾರ ಹತ್ಯೆಗೆ ಸಂಭಂಧಿಸಿದಂತೆ ಈಗಾಗಲೇ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಆದಾಗ್ಯೂ ಗುರುವಾರ ಸಂಜೆ ಗ್ರಾಮದ ಸುನೀಲ ಕಾಂಬಳೆ ಎಂಬಾತ ಬನ್ನಿ ಬಂಗಾರ ಕೊಡುವ ನೆಪ ಮಾಡಿ ಭೀಮನಗೌಡ ಅವರ ಅಪ್ರಾಪ್ತ ಪುತ್ರನ ಅಪಹರಣ ಮಾಡುವ ಸಂಚು ರೂಪಿಸಿದ್ದಾರೆ ಎಂದು ಭೀಮನಗೌಡ ಬಿರಾದಾರ ಕುಟುಂಬದವರು ಆರೊಪಿಸಿದ್ದಾರೆ.
ಆರೋಪಿ ಸುನೀಲ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಎ.ಎಸ್.ಪಿ ರಾಮನಗೌಡ ಹಟ್ಟಿ ಮತ್ತು ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ ಕೆಲ ದಿನಗಳ ಹಿಂದೆ ದೇವರ ನಿಂಬರಗಿಯಲ್ಲಿ ಶಾಂತಿ ಸಭೆ ನಡೆಸಿದ್ದರು. ಶಾಂತಿ ಸಭೆ ನಡೆದ ಮೂರೇ ದಿನಗಳಲ್ಲಿ ದುಷ್ಕರ್ಮಿಗಳು ಇಂಥಹ ಕೃತ್ಯಕ್ಕೆ ಕೈ ಹಾಕಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ರಸ್ತೆ ತಡೆಯಿಂದ ಸಂಚಾರ ಅಸ್ತವ್ಯಸ್ತ
ದೇವರ ನಿಂಬರಗಿಯ ಗ್ರಾಮಸ್ಥರು ರಸ್ತೆ ತಡೆ ನಡೆಸಿದ ಪರಿಣಾಮ ಕಿ.ಮೀಟರ್ ಗಟ್ಟಲೆ ಒಂದು ಗಂಟೆಗಳ ಕಾಲ ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ಅಸ್ತವ್ಯಸ್ತವಾಯಿತು. ಪ್ರತಿಭಟನಾಕಾರರು ಮಾತನಾಡಿ, ಹತ್ಯೆಗೀಡಾದ ಭೀಮನಗೌಡ ಬಿರಾದಾರ ಕುಟುಂಬಕ್ಕೆ ಆರೋಪಿಗಳ ಕಡೆಯಿಂದ ಜೀವ ಭಯವಿದ್ದು, ಕೂಡಲೇ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಘೋಷಣೆ ಕೂಗಿ ಆಗ್ರಹಿಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಚಡಚಣ ಪೊಲೀಸರು ಗುಂಪನ್ನು ಚದುರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.