“ನಾನು ವಿಜ್ಞಾನಿ-2025” ರಾಜ್ಯಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರ
ಉದಯರಶ್ಮಿ ದಿನಪತ್ರಿಕೆ
ಹೊನವಾಡ: ಒಂಬತ್ತು ದಿನಗಳ ಕಾಲ ದೊಡ್ಡಬಳ್ಳಾಪುರದಲ್ಲಿ ನಡೆಯುವ ವಿಶ್ವ ದಾಖಲೆಯ ರಾಜ್ಯ ಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ಜಿಲ್ಲೆಯಿಂದಲೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ತಿಕೋಟಾ ತಾಲೂಕಿನ ಅಧ್ಯಕ್ಷರಾದ ಬೀರಪ್ಪ ಖಂಡೆಕಾರ ತಿಳಿಸಿದರು.
ಶುಭ ಹಾರೈಕೆಯ ಕಾರ್ಯಕ್ರಮದಲ್ಲಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋ ಧನೆ ಪರಿಷತ್ತು, ಇಸ್ರೋ, ಭಾರತ ಸೇವಾದಳ, ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್, ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ಸೇರಿದಂತೆ ಅನೇಕ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಪಥಮ ಟೆಲಿಸ್ಕೋಪ್ ತರಬೇತಿ ಶಿಬಿರ “ನಾನೂ ವಿಜ್ಞಾನಿ -2025” ನಡೆಯಲಿದೆ. ಬೆಸೆಂಟ್ ಪಾರ್ಕ್, ಸೈಟ್ಸ್ ಕ್ಯಾಂಪ್, ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ)ದಲ್ಲಿ ಅ.1ರಿಂದ ಅ.9ರವರೆಗೆ (9 ದಿನಗಳ ಕಾಲ) ನಡೆಯುವ ಈ ಶಿಬಿರದಲ್ಲಿ ರಾಜ್ಯದ 152 ಮಕ್ಕಳು ಭಾಗವಹಿಸಲಿದ್ದು, ಶಿಬಿರದಲ್ಲಿ ತಯಾರಿಸಲಾದ ಟೆಲಿಸ್ಕೋಪ್ ಮೂಲಕ ವಿಶ್ವ ದಾಖಲೆ ನಿರ್ಮಿಸಲಾಗುತ್ತದೆ ಎಂದರು.
ವಿಶ್ವ ಮಟ್ಟದ ಗೌರವಕ್ಕೆ ಪಾತ್ರವಾಗುವ ಈ ಯೋಜನೆ ವರ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಲಿದೆ. ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಎಂಟು ವಿದ್ಯಾರ್ಥಿಗಳ ಪೈಕಿ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಏಳು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದರು.
ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಸ್ಥಳದಲ್ಲೇ ಟೆಲಿಸ್ಕೋಪ್ ತಯಾರಿಸಿ ಅದನ್ನು ಖಗೋಳ ವೀಕ್ಷಣೆಗೆ ಬಳಸುವ ಮೂಲಕ ವಿಶ್ವದಾಖಲೆ ನಿರ್ಮಿಸುವುದು ವಿಶೇಷತೆ. ರಾಜ್ಯದಾದ್ಯಂತ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಹೊನವಾಡದ ವಿದ್ಯಾರ್ಥಿಗಳು ಗಣನೀಯ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಜಿಲ್ಲೆಯ ಹೆಮ್ಮೆಗುರಿಯಾಗಿದೆ ಎಂದು ಶಿಬಿರದ ಉದ್ದೇಶ ತಿಳಿಸಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನೆ ಪರಿಷತ್ತು ಸದಸ್ಯ ಹಾಗೂ ವಿಜ್ಞಾನ ಶಿಕ್ಷಕ ಡಿ ಬಿ ಡೆಂಬ್ರೆ ಮಾತನಾಡಿ, ಈ ಸಂಶೋಧನ ಸಂಸ್ಥೆಯೊಂದು ವೈಜ್ಞಾನಿಕವಾಗಿ ಚಿಂತನೆ ಮಾಡುವ ದೊಡ್ಡ ಸಂಸ್ಥೆಯಾಗಿದ್ದು, ವೈಜ್ಞಾನಿಕವಾಗಿ ಚಿಂತನೆ ಮಾಡುವುದು ಉತ್ತಮ ಎಂಬುದು ಇದರ ಮುಖ್ಯ ಉದ್ದೇಶವಾಗಿದೆ. ಈ ಸಂಸ್ಥೆಯಲ್ಲಿ ನಾಗಮೋಹನ್ ದಾಸ್, ಕಿರಣ್ ಕುಮಾರ್. ಹುಲಿಗಲ್ ನಟರಾಜು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ಹಲವಾರು ಜನರು ಇದ್ದಾರೆ ಎಂದರು.
ಈ ಸಂಸ್ಥೆ ಬಗ್ಗೆ ಹಲವಾರು ಜನರಿಗೆ ತಿಳಿದಿಲ್ಲ. ಈ ಬಗ್ಗೆ ತಿಳುವಳಿಕೆ ನೀಡಬೇಕಾಗಿದೆ.. ನಾನು ಒಬ್ಬ ವಿಜ್ಞಾನಿ ಎನ್ನುವ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರಕ್ಕೆ ಮಕ್ಕಳನ್ನು ಅವರ ಪೋಷಕರೊಂದಿಗೆ ಕಳುಹಿಸಲಾಗುತ್ತಿದೆ. ಶಿಬಿರಕ್ಕೆ ಹೋಗಿ ನಂತರ ವಾಪಸ್ ಟೆಲಿಸ್ಕೋಪ್ ನೊಂದಿಗೆ ಬರಲಿದ್ದಾರೆ ಎಂದು ಹೇಳಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಪ್ರತಿಭಾ ಸಾಹಿತ್ಯ ವೇದಿಕೆ ಹಾಗೂ ಪ್ರಥಮ ಪೌಂಡೇಷನ್ ವತಿಯಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪೆನ್ನು ಮತ್ತು ಡೈರಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಾ ಸಾಹಿತ್ಯ ವೇದಿಕೆ ಗೌರವ ಅಧ್ಯಕ್ಷ ವಾಯ್ ಬಿ ವಾಲಿಕಾರ, ಶಿಕ್ಷಕ ರಾಜು ತಳಕೇರಿ, ಪ್ರತಿಭಾ ಸಾಹಿತ್ಯ ವೇದಿಕೆ ಅಧ್ಯಕ್ಷ ಧರೆಪ್ಪ ಸಿದ್ನಾಥ, ಸದಸ್ಯರಾದ ನಿಂಗಪ್ಪ ಕೋಟಿ, ರೈತ ಸಂಘದ ಅಧ್ಯಕ್ಷ ಧರೆಪ್ಪ ಗುಗ್ಗರಿ, ಶೈಲಾ ಜನಗೊಂಡ, ಶಂಕರ ನರಳೆ, ರೋಹಿತ ತಿವಾರಿ, ಸಂತೋಷ ಸಾವಂತ ಸೇರಿದಂತೆ ಇತರರು ಉಪಸ್ಥಿತರಿದ್ದರು.

