ಗ್ರಾಮ ಪಂಚಾಯತ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಎಚ್. ಪಠಾಣ ಆರೋಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು ಪಂಚಾಯತಗಳಿಗೆ ಚುನಾವಣೆ ನಡೆದಿಲ್ಲ. ಸಂವಿಧಾನದ ಅನುಚ್ಛೇದ ೨೪೩ಇ ಪ್ರತಿ ಪಂಚಾಯುತ ಐದು ವರ್ಷಗಳ ಅವಧಿಯನ್ನು ಹೊಂದಿದ್ದು ಚುನಾವಣೆಗಳನ್ನು ಮುಕ್ತಾಯದ ಮೊದಲು ನಡೆಸಬೇಕೆಂದು ಹೇಳುತ್ತದೆ ಎಂದು ಗ್ರಾಮ ಪಂಚಾಯತ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಎಚ್. ಪಠಾಣ ಹೇಳಿದರು.
ನಗರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ ಅಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಝ್ ಅಧಿನಿಯಮ ೧೯೯೩ ಕ್ಕೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ವಿಂಗಡನೆ ಆಯೋಗವನ್ನು ರಚಿಸುವ ಮೂಲಕ ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು ಪಂಚಾಯತ ಚುನಾವಣೆಗಳನ್ನು ಮುಂದೂಡಿತ್ತು. ಈ ತಿದ್ದುಪಡಿಗೆ ಸಭಾ ತ್ಯಾಗ ಮಾಡುವ ಮೂಲಕ ಹಿಂಬಾಗಿಲಿನಿಂದ ಕಾಂಗ್ರೆಸ್ ಪಕ್ಷವು ಕೈ ಜೋಡಿಸಿತ್ತು. ನಂತರದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೂ ಅದು ಕೂಡ ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು ಪಂಚಾಯತ ಚುನಾವಣೆಗಳನ್ನು ನಡೆಸುವ ಬದಲು ಹೊಸ ಹೊಸ ದಾರಿಗಳನ್ನು ಹುಡುಕುವ ಮೂಲಕ ಚುನಾವಣೆಗಳನ್ನು ಮುಂದೂಡುತ್ತಲೆ ಬರುತ್ತಿದೆ.
ಇದೀಗ ಬಂದ ಮಾಹಿತಿಯಂತೆ ಗ್ರಾಮ ಪಂಚಾಯತಿ ಚುನಾವಣೆಗಳನ್ನು ಕ್ಷೇತ್ರ ಮರು ವಿಂಗಡಣೆ ಹಾಗೂ ಪಕ್ಷಾದಾರಿತ ಚುನಾವಣೆ ನಡೆಸುವ ವಿಚಾರದಲ್ಲಿ ಚುನಾವಣೆಗಳನ್ನು ಮುಂದೂಡುವ ಹುನ್ನಾರ ರಾಜ್ಯದ ಘನ ಸರ್ಕಾರ ಯಾವ ಪಕ್ಷದ ರಾಷ್ಟ್ರೀಯ ಧುರೀಣರು ಸಂವಿಧಾನವನ್ನ ಕೈಯಲ್ಲಿ ಹಿಡಿದು ಸಂವಿಧಾನದ ಅರಿವನ್ನು ಮೂಡಿಸುವಂತಹವರು, ಸಂವಿಧಾನದಲ್ಲಿ ಸಮಯಕ್ಕೆ ಸರಿಯಾಗಿ ಅವಧಿಗೆ ಮೊದಲು ಸ್ಥಳೀಯ ಸಂಸ್ಥೆಗಳ ಚನಾವಣೆ ನಡೆಯಬೇಕೆಂದು ಹೇಳುತ್ತದೆ. ಆದರೂ ಅಂತಹ ಪಕ್ಷದ ಆಡಳಿತವಿದ್ದರೂ ಅವರು ಕೂಡ ಚುನಾವಣೆಗಳನ್ನು ಮುಂದೂಡುವ ಹುನ್ನಾರ ನಡೆಸುತ್ತಿದ್ದಾರೆಂಬುವುದು ಗೊತ್ತಾಗಿರುತ್ತದೆ. ನಾವುಗಳು ಗ್ರಾಮ ಪಂಚಾಯತ ಸದಸ್ಯರು ಜಿಲ್ಲಾ ಒಕ್ಕೂಟ ಒಕ್ಕೋರಲಿನಿಂದ ಕೋರುತ್ತೇವೆ. ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಯಬೇಕು ಒಂದು ವೇಳೆ ನಡೆಯದೆ ಇದ್ದರೆ ನಾವೆಲ್ಲ ಬೀದಿಗೆ ಇಳಿದು ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಈ ಮೂಲಕ ಮುಖ್ಯಮಂತ್ರಿಗಳಲ್ಲಿ ಕೇಳಿಕೊಳ್ಳುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರದೀಪ ಚ. ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಸಿದಗೊಂಡ ರುದ್ರಗೌಡರ, ಜಿಲ್ಲಾ ಕಾನೂನು ಸಲಹೆಗಾರರಾದ ಬಾಪುಗೌಡ ಬಿರಾದಾರ, ರಮೇಶ ರಾಠೋಡ, ಸಾಹೇಬಗೌಡ ಪಾಟೀಲ, ಬಿ.ಸಿ.ಚೌಧರಿ, ರಮೇಶ ಮಂಗಳೂರು, ಮಶಾಕ ಕಮತಗಿ, ಆದಿಲ್ ವಾಲಿಕಾರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

