ಹೆದ್ದಾರಿಯ ತಗ್ಗು-ಗುಂಡಿಗಳ ಮದ್ಯೆ ಸಸಿ ನೆಡುವ ಮೂಲಕ ಬಿಜೆಪಿ ಪ್ರತಿಭಟನೆ | ಮಾಜಿ ಶಾಸಕ ರಮೇಶ ಭೂಸನೂರ ವಾಗ್ದಾಳಿ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ:
ಉಪಚುನಾವಣೆಯಲ್ಲಿ ನಾನು ನೀಡದ್ದ ಭರವಸೆಗಳಾದ ಡಂಬಳ ಗ್ರಾಮದಿಂದ ಕರ್ನಾಳವರೆಗೆ ಡಾಂಬರ ರಸ್ತೆ, ಗೋಲ್ಲಾಳೇಶ್ವರ ದೇವಸ್ಥಾನದಿಂದ ಕೊಂಡಗೂಳಿವರೆಗೆ, ಗೋಲಗೇರಿಯಿಂದ ಗುಬ್ಬೆವಾಡವರೆಗೆ ರಸ್ತೆ ನನ್ನ ಅವಧಿಯಲ್ಲಿಯೇ ಆಗಿವೆ. ಸುಖಾ ಸುಮ್ಮನೆ ಟೀಕೆ ಮಾಡುವುದನ್ನು ಬಿಟ್ಟು, ಸುಳ್ಳು ಆಶ್ವಾಸನೆಗಳನ್ನು ನೀಡುವುದನ್ನು ಬಿಡಿ. ಶಾಸಕರೇ ನಿಮ್ಮ ಎರಡುವರೆ ವರ್ಷದ ಅವಧಿಯಲ್ಲಿ ಈ ಭಾಗದಲ್ಲಿ ಒಂದೇ ೧ಕಿಮೀ ರಸ್ತೆ ಮಾಡಿದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹಾಲಿ ಶಾಸಕರಿಗೆ ಸಾವಲೆಸೆದರು.
ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಡಂಬಳ ಕ್ರಾಸ್‌ನಲ್ಲಿ ಹಾದು ಹೋಗುವ ಕೋಡಂಗಲ್ ರಾಜ್ಯ ಹೆದ್ದಾರಿಯ ತಗ್ಗು-ಗುಂಡಿಗಳ ಮದ್ಯೆ ಸಸಿ ನೆಡುವ ಮೂಲಕ ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ಕೋಡಂಗಲ್ ರಾಜ್ಯ ಹೆದ್ದಾರಿಯು ಸುಮಾರು ವರ್ಷದಿಂದ ಹದಗೆಟ್ಟು ಎಲ್ಲಂದರಲ್ಲಿ ತಗ್ಗು-ಗುಂಡಿಗಳು ಬಿದ್ದು ಪ್ರಾಣಾಪಯಕ್ಕೆ ಕೈಬಿಸಿ ಕರೆಯುವ ಸ್ಥಿತಿ ನಿರ್ಮಾಣವಾದರು ಇತ್ತ ಕಡೆ ಸರಕಾರ ಮತ್ತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸಬೇ ಇರುವುದು ಖೇದರಕ ಸಂಗತಿ. ತಗ್ಗು ಗುಂಡಿ ಬಿದ್ದ ಈ ರಸ್ತೆಯಿಂದ ಈಗಾಗಲೇ ಎರಡ ಮೂರು ಬಾರಿ ಸರಕಾರಿ ಬಸ್ ಪಲ್ಟಿಯಾಗಿ ಶಾಲಾ ಮಕ್ಕಳಿಗೆ ಮತ್ತು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಿಮಗೆ ಮೂರು ತಿಂಗಳು ಕಾಲಾವಕಾಶ ನೀಡುತ್ತೇನೆ ಟೆಂಡರ್ ಕರೆದು ಗುದ್ದಲಿ ಪೂಜೆ ಮಾಡಿ. ಇನ್ನೂ ಮಂಜೂರಾಗಿಲ್ಲ, ಟೆಂಟರ್ ಕರೆದಿಲ್ಲ, ಸುಳ್ಳು ಪಟಾಕಿ ಹೊಡೆಯುವುದನ್ನು ಬಿಡಿ. ಕಾರ್ಯಕರ್ತರು ಶಾಸಕರನ್ನು ಮೆಚ್ಚಿಸಲು ಪಟಾಕಿ ಹಾರಿಸುತ್ತಿರುವಿರಿ ಅದನ್ನು ಮೊದಲು ಬಿಡಿ. ಚಾಲಕರು ಪ್ರಾಣ ಕೈಯಲ್ಲಿಡಿದು ವಾಹನ ಚಲಾಯಿಸುವ ಸನ್ನಿವೇಶ ಎದುರಾಗಿದೆ. ಕೂಡಲೇ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರಕಾರ ಮುಂದಾಗಬೇಕಿದೆ. ರಸ್ತೆ ನಿರ್ಮಿಸಿಕೊಂಡು ನಾವೆಲ್ಲರೂ ಅಪಘಾತದಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಬೇಕಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಸಿದ್ದನಗೌಡ ಪಾಟೀಲ, ಪಿರೂ ಕೆರೂರ, ಎಸ್.ಆರ್.ಪಾಟೀಲ, ಸಿದ್ದಣ್ಣ ತಳವಾರ ಮಾತನಾಡಿದರು. ಪ್ರತಿಭಟನೆಯಲ್ಲಿ ಪ್ರಶಾಂತ ಕದ್ದರಕಿ, ಅಶೋಕ ನಾರಾಣಪೂರ, ಸಂಗನಗೌಡ ಪಾಟೀಲ, ಶ್ರೀಶೈಲ ಚಳ್ಳಗಿ, ಶಿವಣ್ಣ ಮಾರಲಬಾವಿ, ಮಲ್ಲು ಗುಡಿಮನಿ, ಮಲ್ಲು ರಾಠೋಡ, ರಮೇಶ ವಂದಾಲ, ರಾಜುಗೌಡ ಪಾಟೀಲ ಸೇರಿದಂತೆ ಸಿಂದಗಿ ಮಂಡಲದ ಪದಾಧಿಕಾರಿಗಳು, ಡಂಬಳ, ಗೋಲಗೇರಿ, ಸಾಸಬಾಳ, ಡವಳಾರ, ಖಾನಾಪುರ, ಕರವಿನಾಳ, ಯಕಂಚಿ, ಸುಂಗಠಾಣ ಕಾರ್ಯಕರ್ತ ಭಾಗವಹಿಸಿದ್ದರು.

“ಪೊಲೀಸರು ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಬಾರದು. ಪೊಲೀಸ್ ಕಛೇರಿ ಕಾಂಗ್ರೆಸ್ ಪಕ್ಷದ ಕಛೇರಿಯಾಗಲು ನಾವು ಬಿಡುವುದಿಲ್ಲ. ನಾವು ವಿರೋಧ ಪಕ್ಷದವರು ಎಂಬುದು ಪೊಲಿಸ್ ಅಧಿಕಾರಿಗಳಿಗೆ ನೆನಪಿನಲ್ಲಿರಲಿ. ಸಿಂದಗಿ ಮತಕ್ಷೇತ್ರದಲ್ಲಿ ಗುಡಿ ಕಟ್ಟಿದ್ದು ನಾನು ಕಳಸ ಇಡುತ್ತಿರುವುದು ಮಾತ್ರ ಹಾಲಿ ಶಾಸಕರು.”
– ರಮೇಶ ಭೂನಸೂರ
ಮಾಜಿ ಶಾಸಕರು