ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಧ್ಯಮದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮಾಜದಲ್ಲಿನ ಅಸಮಾನತೆಗೆ ಕಾರಣಗಳು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಮಾಧ್ಯಮಗಳು ತೊಡಗಬೇಕು. ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸಬೇಕು. ಹಾಗೆಯೇ ದುರ್ಬಲ ವರ್ಗದವರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ಶುಕ್ರವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ೨೦೨೪ ನೇ ಕ್ಯಾಲೆಂಡರ್ ವರ್ಷದ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ೨೦೧೭ ರಿಂದ ೨೦೨೩ ನೇ ಕ್ಯಾಲೆಂಡರ್ ವರ್ಷದ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು ಮಾಧ್ಯಮಗಳು ಸತ್ಯ ಅಸತ್ಯದ ಶೋಧನೆ ನಡೆಸಬೇಕು. ವರದಿಗಳಾಗಲಿ ಅಥವಾ ಅಭಿಪ್ರಾಯಗಳಾಗಲಿ ವಸ್ತುಸ್ಥಿತಿಯಿಂದ ಕೂಡಿರಬೇಕು. ಕಲ್ಪನೆಯ ವರದಿ ಆಗಬಾರದು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಊಹಾ ಪತ್ರಿಕೋದ್ಯಮ ಜೋತುಬೀಳುತ್ತಿವೆ. ಅದು ಆಗಬಾರದು. ಸತ್ಯ ಅಸತ್ಯಗಳನ್ನು ಪತ್ತೆ ಹಚ್ಚಿ, ಸತ್ಯವನ್ನು ಶೋಧನೆ ಮಾಡುವ ಕಾರ್ಯವನ್ನು ಪತ್ರಿಕೋದ್ಯಮ ಮಾಡಬೇಕು ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಒಬ್ಬ ವ್ಯಕ್ತಿಯು ತಪ್ಪು ಮಾಡದಿದ್ದರೂ, ಸುಮ್ಮನೆ ಆರೋಪಗಳನ್ನು ಮಾಡಬಾರದು. ಸರ್ಕಾರದಲ್ಲಿ ಎಲ್ಲವೂ ಸರಿಯಾಗಿರುವುದಿಲ್ಲ ನಿಜ, ಆದರೆ ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನ ವಿರೋಧಿ ಕಾರ್ಯವನ್ನು ಸರ್ಕಾರ ಮಾಡಿದರೆ ಅದನ್ನೂ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು.
ನಿಷ್ಠುರ ಮತ್ತು ವಸ್ತುನಿಷ್ಠ, ಜನಪರ ಪತ್ರಿಕೋದ್ಯಮ ಸಾಧ್ಯ ಎಂದು ಬಲವಾಗಿ ನಂಬಿ ಆ ನಿಟ್ಟಿನಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ಸಾಮಾಜಿಕ ನ್ಯಾಯದ ಸ್ಪಷ್ಟ ಧ್ವನಿಯಾಗಿ ಹೊಸ ಮಾರ್ಗದಲ್ಲಿ ನಡೆದ ವ್ಯಕ್ತಿ ಎಂದು ರಘುರಾಮ ಶೆಟ್ಟಿಯವರನ್ನು ಸ್ಮರಿಸಿದರು.
ಪತ್ರಕರ್ತರು ಪರಿಸರ ನ್ಯಾಯಕ್ಕೆ ಬದ್ಧವಾಗಿರಬೇಕು :ಪರಿಸರ ಅಭಿವೃದ್ಧಿ ಸಂರಕ್ಷಣೆಗೆ ಮಾಧ್ಯಮಗಳು ಹೆಚ್ಚು ಒತ್ತು ನೀಡಬೇಕು. ಪತ್ರಕರ್ತರು ಪರಿಸರ ನ್ಯಾಯಕ್ಕೆ ಬದ್ಧವಾಗಿರಬೇಕು. ಸ್ವಾತಂತ್ರ‍್ಯ ಪೂರ್ವದ ಮಾಧ್ಯಮ ರಂಗಕ್ಕೂ ಇಂದಿನ ಮಾಧ್ಯಮ ರಂಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಸ್ವಾತಂತ್ರ‍್ಯೋತ್ತರ ಪತ್ರಿಕೋದ್ಯಮ ಶ್ರೀಮಂತರ ಕೈಗಳಿಗೆ ಸಿಕ್ಕಿಹಾಕಿಕೊಂಡಿದೆ. ಪತ್ರಕರ್ತರು ಇದನ್ನು ಅರ್ಥ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರು ಪ್ರಾಸ್ತಾವಿಕ ಮಾತನಾಡುತ್ತಾ, ಪ್ರಸಕ್ತ ವರ್ಷ ವಡ್ಡರ್ಸೆ ರಘುರಾಮಶೆಟ್ಟಿ ಅವರ ಸ್ಮರಣಾರ್ಥವಾಗಿ ೨೦೨೪ನೇ ಕ್ಯಾಲೆಂಡರ್ ವರ್ಷದ ವಡ್ಡರ್ಸೆ ರಘುರಾಮಶೆಟ್ಟಿ “ಸಾಮಾಜಿಕ ನ್ಯಾಯ ಪತ್ರಿಕೋದ್ಯಮ” ವಿಶೇಷ ಪ್ರಶಸ್ತಿ ಹಾಗೂ ೨೦೧೭ ರಿಂದ ೨೦೨೩ನೇ ಕ್ಯಾಲೆಂಡರ್ ವರ್ಷದ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪ್ರದಾನ ಮಾಡಲಾಗುತ್ತಿದೆ ಎಂದರು.
ಸರ್ಕಾರವು ೨೦೧೭ ರಿಂದ ಬಾಕಿ ಇದ್ದ ಪರಿಸರ ಮತ್ತು ಅಭಿವೃದ್ಧಿ ಪ್ರಶಸ್ತಿ ಹಾಗೂ ೫ ವರ್ಷಗಳಿಂದ ಬಾಕಿ ಇದ್ದ ಮೊಹರೆ ಹಣಮಂತರಾಯ ಹಾಗೂ ಟಿಯೇಸ್ಸಾರ್ ಪ್ರಶಸ್ತಿ ನೀಡಲು ಸಮಿತಿಯನ್ನು ರಚಿಸಿ, ಪ್ರಶಸ್ತಿ ನೀಡುವ ಮೂಲಕ ಪತ್ರಕರ್ತರಿಗೆೆ ಶಬ್ಬಾಷ್ ಎಂದು ಸರ್ಕಾರ ಹೇಳಿದೆ. ಅಲ್ಲದೆ ಸರ್ಕಾರವು ಕಳೆದ ಎರಡು ವರ್ಷಗಳಿಂದ ಪತ್ರಕರ್ತರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್, ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದೆ. ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ, ಕುಟುಂಬ ಮಾಸಾಶನವನ್ನು ಸಹ ನೀಡಿದೆ. ಪತ್ರಕರ್ತರಿಗಾಗಿ ಮೀಡಿಯಾ ಫೆಸ್ಟ್, ಕಾರ್ಯಾಗಾರಗಳು ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಕ್ಯಾಮೆರಾ, ಲ್ಯಾಪ್ ಟಾಪ್ ಹಾಗೂ ಇನ್ನಿತರ ಉಪಕರಣಗಳನ್ನೊಳಗೊಂಡ ಮಾಧ್ಯಮ ಕಿಟ್‌ಗಳನ್ನು ಸಹ ವಿತರಿಸುವುದರ ಮೂಲಕ ಸರ್ಕಾರ ಪತ್ರಕರ್ತರಿಗೆ ಶಬ್ಬಾಷ್ ಹೇಳುವಂತಹ ಕೆಲಸ ಮಾಡುತ್ತಿದೆ.
ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಡಿ.ಉಮಾಪತಿ ಅವರು ಮಾತನಾಡುತ್ತಾ, ಸಮಾಜದ ಅಭಿವೃದ್ಧಿಯಾಗಬೇಕೆಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ತಲುಪಬೇಕು. ಇದು ಸರ್ಕಾರ, ಸಮಾಜ ಹಾಗೂ ಪತ್ರಿಕೆಗಳ ಸಾಮೂಹಿಕ ಜವಾಬ್ದಾರಿಯಾಗಿದೆ. ಜನಪರ ಆಶಯಗಳನ್ನಿಟ್ಟುಕೊಂಡು ಪತ್ರಿಕೆಗಳು, ಮಾಧ್ಯಮಗಳು ಜನಪರ ಆಶಯಗಳನ್ನಿಟುಕೊಂಡು ಕೆಲಸ ನಿರ್ವಹಿಸಬೇಕು. ದೀನ ದಲಿತರ, ದಮನಿತರ ಧ್ವನಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾದ ಶ್ರೀಮತಿ ಬಿ.ಬಿ.ಕಾವೇರಿ ಅವರು ಸ್ವಾಗತ ಕೋರಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವರಾದ ಬಿ.ಎಸ್.ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮದ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಸಲೀಂ ಅಹಮದ್, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕಾನೂನು ಆಯೋಗದ ಅಧ್ಯಕ್ಷರು ಮತ್ತು ೨೦೨೪ ನೇ ಕ್ಯಾಲೆಂಡರ್ ವರ್ಷದ ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಅಶೋಕ್ ಬಿ ಹಿಂಚಿಗೇರಿ, ವಿಧಾನ ಪರಿಷತ್ ಸದಸ್ಯರು ಹಾಗೂ ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರೂ ಆದ ಕೆ.ಶಿವಕುಮಾರ್, ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಂ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸಾಧು ಕೋಕಿಲ, ಶ್ರೀ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷರಾದ ಮೆಹಬೂಬ್ ಪಾಷಾ ಸೇರಿದಂತೆ ಹಿರಿಯ ಪತ್ರಕರ್ತರು, ಪ್ರಶಸ್ತಿ ಪುರಸ್ಕೃತರ ಕುಟುಂಬದವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಮಾಧ್ಯಮದವರು ಉಪಸ್ಥಿತರಿದ್ದರು.
ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾದ ಪತ್ರಕರ್ತರು
ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ೨೦೧೭ನೇ ಸಾಲಿಗೆ, ಶ್ರೀಮತಿ ವಿಜಯಲಕ್ಷ್ಮಿ ಶಿಬರೂರು, ೨೦೧೮ ನೇ ಸಾಲಿಗೆ ಶ್ರೀ ಬಿ.ಟಿ.ಎಂ. ರಾಜೀವ್, ೨೦೧೯ನೇ ಸಾಲಿಗೆ ಶ್ರೀ ವಿನೋದ ಕುಮಾರ್ ನಾಯ್ಕ್, ೨೦೨೦ನೇ ಸಾಲಿಗೆ ಶ್ರೀ ಮಾಲತೇಶ ಅಂಗೂರ, ೨೦೨೧ನೇ ಸಾಲಿಗೆ ಶ್ರೀ ಸುಧೀರ್ ಶೆಟ್ಟಿ, ೨೦೨೨ನೇ ಸಾಲಿಗೆ ಶ್ರೀ ಮಲ್ಲಿಕಾರ್ಜುನ ಹೊಸಪಾಳ್ಯ ಹಾಗೂ ೨೦೨೩ನೇ ಸಾಲಿಗೆ ಆರ್. ಮಂಜುನಾಥ್ ಅವರು ಭಾಜನರಾಗಿದ್ದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ೨೦೧೭ನೇ ಸಾಲಿಗೆ ಶ್ರೀ ಚೀ.ಜ. ರಾಜೀವ್, ೨೦೧೮ನೇ ಸಾಲಿಗೆ ಶ್ರೀ ದೇವಯ್ಯ ಗುತ್ತೇದಾರ್, ೨೦೧೯ನೇ ಸಾಲಿಗೆ ಶ್ರೀ ಗಿರೀಶ್ ಲಿಂಗಣ್ಣ, ೨೦೨೦ನೇ ಸಾಲಿಗೆ ಶ್ರೀ ಯೋಗೀಶ್ ಎಂ.ಎನ್., ೨೦೨೧ನೇ ಸಾಲಿಗೆ ಶ್ರೀ ನೌಶಾದ್ ಬಿಜಾಪುರ, ೨೦೨೨ನೇ ಸಾಲಿಗೆ ಶ್ರೀ ಸತೀಶ್ ಜಿ.ಟಿ ಮತ್ತು ೨೦೨೩ನೇ ಸಾಲಿಗೆ ಶ್ರೀ ಗಿರೀಶ್ ಬಾಬು ಅವರು ಭಾಜನರಾಗಿದ್ದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
೨೦೨೪ ನೇ ಕ್ಯಾಲೆಂಡರ್ ವರ್ಷದ ಶ್ರೀ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಯನ್ನು ಹಿರಿಯ ಪತ್ರಕರ್ತರಾದ ಡಿ.ಉಮಾಪತಿ ಅವರಿಗೆ ಪ್ರದಾನ ಮಾಡಲಾಯಿತು.