ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಾಶವಾಗಿದ್ದು ರೈತರಿಗೆ ಎಕರೆಗೆ ೨೫ ಸಾವಿರ.ರೂಗಳ ಪರಿಹಾರ ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ರೈತರ ಸಂಘದ ಪದಾಧಿಕಾರಿಗಳು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಶನಿವಾರ ಆಗಮಿಸಿದ ರಾಷ್ಟ್ರೀಯ ರೈತರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿ ಮುಂಗಾರು ಬೆಳೆ ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ನಿಂತು ಹಾನಿಗೊಳಗಾದ ಬಗ್ಗೆ ತಹಶೀಲ್ದಾರರ ಗಮನ ಸೆಳೆದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಕಾರ್ಯದರ್ಶಿ ರೇಣುಕಾ ಪಾಟೀಲ ಮಾತನಾಡಿ, ತೊಗರಿ ಬೆಳೆ ನೆಟೆ ರೋಗದಿಂದ, ಹತ್ತಿ ತಾಂಬ್ರ ರೋಗ ಹಾಗೂ ಕಾಂಡ ಕೊರೆವ ಹುಳದ ಕಾರಣ ಹಾಗೂ ಮಕ್ಕೆಜೋಳ, ಹೆಸರು, ಉದ್ದ, ಅಲಸಂದಿ, ಶೇಂಗಾ, ಉಳ್ಳಾಗಡ್ಡಿ ಬೆಳೆಗಳು ನೀರಿನಲ್ಲಿ ನಿಂತು ಸಂಪೂರ್ಣ ಹಾಳಾಗಿದೆ. ಭಿತ್ತಿದ ಬೆಳೆ ನಾಶದಿಂದ ಈಗ ರೈತರು ಸಂಕಟದಲ್ಲಿದ್ದಾರೆ ಆದ್ದರಿಂದ ತಹಶೀಲ್ದಾರ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಮಂಜೂರ ಮಾಡಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಕಾಂತ ಪ್ಯಾಟಿ, ಜಿಲ್ಲಾ ಉಪಾಧ್ಯಕ್ಷ ಸಂಪತ್ ಜಮಾದಾರ ಮಾತನಾಡಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ, ತಾಲ್ಲೂಕಿನಲ್ಲಿ ಈಗಾಗಲೇ ಹಾನಿಗೊಳಗಾದ ಬೆಳೆಯ ಸಮೀಕ್ಷೆ ಮಾಡಲಾಗಿದೆ. ಈಗ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ತಾಲ್ಲೂಕು ಯುವಮೋರ್ಚಾ ಅಧ್ಯಕ್ಷ ಸಂಗಮೇಶ ಹುಣಸಗಿ, ಹಣಮಂತ್ರಾಯ ಪೋ.ಪಾಟೀಲ, ಸಾಹೇಬಗೌಡ ಪೋ.ಪಾಟೀಲ, ದ್ಯಾವಪ್ಪಗೌಡ ಪಾಟೀಲ, ಅಶೋಕ ನಾಯ್ಕೋಡಿ, ಆಕಾಶ ಹುಲಸೂರ, ಅಕ್ಬರ್ ಅರಬ್, ಬಸವರಾಜ ಮರಾಠಿ, ಗಣೇಶ ಕನ್ನೋಳ್ಳಿ, ಶಕೀರಾ ಹೆಬ್ಬಾಳ, ಅಡಿವೆಪ್ಪ ಬನ್ನಿಕಟ್ಟಿ, ಪ್ರವೀಣ ಹರಸೂರ, ಶಿವಾನಂದ ಹುಲಸೂರ, ಅಂಬೋಜಿ ಮರಾಠಿ, ಕಲ್ಲಪ್ಪಗೌಡ ಪಾಟೀಲ ಇದ್ದರು.

