ಬಿಜೆಪಿ ಪಕ್ಷದ ತಳವಾರ ಸಮಾಜದ ಮುಖಂಡರ ನಿಲುವಿಗೆ ತಳವಾರ ಮಹಾಸಭಾ ಖಂಡನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಎಲ್ಲ ಸಮಾಜಗಳೊಟ್ಟಿಗೆ ತಳವಾರ ಸಮಾಜದೊಂದಿಗೂ ಅನ್ಯೋನ್ಯತೆಯಿಂದಿರುವ ಶಾಸಕರ ಮೇಲೆ ವಿನಾಕಾರಣ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಬಿಜೆಪಿ ಪಕ್ಷದ ತಳವಾರ ಸಮಾಜದ ಮುಖಂಡರ ನಿಲುವು ಖಂಡನೀಯ ಎಂದು ಪುರಸಭೆ ಸದಸ್ಯ ಬಸವರಾಜ ಯರನಾಳ ಹರಿಹಾಯ್ದರು.
ಸಿಂದಗಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ತಳವಾರ ಮಹಾಸಭಾ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ದೊರಕಿರುವುದು ಸಂವಿಧಾನಾತ್ಮಕವಾಗಿಯೇ ಹೊರತು ಬಿಜೆಪಿ ಅವರ ಕೃಪಾ ಕಟಾಕ್ಷದಿಂದಲ್ಲ. ಶಾಸಕರ ಸಾಧನೆ ಏನು ಎಂದು ಪ್ರಶ್ನಿಸುವವ ನೀವು ಮಾಡಿದ ೧೨ವರ್ಷಗಳ ಸಾಧನೆಗಳಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ಅಶೋಕ ಮನಗೂಳಿ ಅವರು ಕೇವಲ ಎರಡೂವರೆ ವರ್ಷಗಳಲ್ಲಿ ಮಾಡಿದ್ದಾರೆ. ಅಭಿವೃದ್ಧಿಯನ್ನು ಪ್ರಶಂಸಿಸಬೇಕೆ ಹೊರತು ವಿರೋಧ ಪಕ್ಷವೆಂಬ ಒಂದೆ ಕಾರಣಕ್ಕೆ ಎಲ್ಲವನ್ನು ದ್ವೇಷಿಸುವುದು ಬಾಲಿಶತನವಾಗುತ್ತದೆ ಎಂದರು.
ಈ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭು ವಾಲೀಕಾರ ಮಾತನಾಡಿ, ಮಾಜಿ ಶಾಸಕರ ಕೊಡುಗೆ ಸಮಾಜಕ್ಕೆ ಶೂನ್ಯ. ಆದರೆ ತಳವಾರ ಸಮಾಜವನ್ನು ಹಾಲಿ ಶಾಸಕರು ಕಡೆಗಣಿಸುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು, ಕುಮಸಗಿ ಗ್ರಾಮದಲ್ಲಿ ಹತ್ತಾರುಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಳವಾರ ಸಮುದಾಯ ಭವನವನ್ನು ೩೦ಲಕ್ಷ ಅನುದಾನದಲ್ಲಿ ಕಾಮಗಾರಿ ಚಾಲ್ತಿಗೊಂಡಿದೆ. ಅಲಹಳ್ಳಿ, ಆಲಮೇಲ, ಶಂಬೇವಾಡ ಮುಂತಾದೆಡೆ ಸ್ವಂತ ಖರ್ಚಿನಲ್ಲಿ ಮೂರ್ತಿ ಸ್ಥಾಪನೆಗೆ ಹಣಕಾಸಿನ ನೆರವು ನೀಡಿದ್ದಾರೆ. ರಾಮನಹಳ್ಳಿಯಲ್ಲಿ ವೀರಯೋಧನ ಮೂರ್ತಿ ಸ್ಥಾಪನೆ, ಆಲಮೇಲ ಕೆರೆ ನಿರ್ಮಾಣ, ೨ಕಿಮೀ ಗಳಷ್ಟು ರಸ್ತೆ, ಬಿದಿ ದೀಪಗಳ ಅಳವಡಿಕೆ, ರಸ್ತೆ ಅಗಲಿಕರಣದಂತಹ ಹಲವಾರು ಕಾರ್ಯ ಮಾಡಿದ್ದಲ್ಲದೇ ಸಿಂದಗಿ ನಗರದಲ್ಲಿಯೂ ತಳವಾರ ಸಮಾಜಕ್ಕೆ ಭೂಮಿ ನೀಡುವುದರ ಜೊತೆಗೆ ಅನುದಾನವನ್ನು ನೀಡಿದ್ದು, ಸಮಾಜದ ಒಳಿತಿಗಲ್ಲದೆ ಮತ್ತೇನು? ಎಂದು ಪ್ರಶ್ನಿಸಿದರು.
ಈ ವೇಳೆ ಮಡಿವಾಳಪ್ಪ ನಾಯ್ಕೋಡಿ ಮಾತನಾಡಿ, ಶಾಸಕರು ಸರಕಾರಿ ನೌಕರರು ಅದರಲ್ಲೂ ತಳವಾರ ಸಮುದಾಯದ ನೌಕರರಿಗೆ ತೊಂದರೆ ನೀಡುತ್ತಿದ್ದಾರೆ ಎನ್ನುವುದನ್ನು ಸಾಬೀತು ಪಡಿಸಬೇಕು ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ಕೋಟರಗಸ್ತಿ, ದವಲಪ್ಪ ಸೊನ್ನ, ಅನಿಲ ಉಡಚಣ, ಸಿದ್ದು ಮಾರದ, ಸಂಜೀವಕುಮಾರ ತಳವಾರ, ಪರಶುರಾಮ ನಾಯ್ಕೋಡಿ, ಸುರೇಶ ನಾಯ್ಕೋಡಿ, ವಿಜಯಕುಮಾರ ಯಳವಾರ, ಲಕ್ಕಪ್ಪ ಮೂಲಿ, ಭೋಗಪ್ಪ ನರಗೋದಿ, ಅನಿಲ ಕಡಕೋಳ ಸೇರಿದಂತೆ ತಳವಾರ ಸಮಾಜ ಬಾಂಧವರು ಇದ್ದರು.

