೬.೫ ಕೆ.ಜಿ ಚಿನ್ನಾಭರಣ, ರೂ.೪೧ಲಕ್ಷ ನಗದು ವಶ!
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದಲ್ಲಿ ದಿ.೧೬ ಮಂಗಳವಾರ ನಡೆದ ಎಸ್‌ಬಿಐ ಬ್ಯಾಂಕ ದರೋಡೆ ಪ್ರಕರಣ ತನಿಖೆ ನಡೆದಿದ್ದು, ಮೊದಲ ಹಂತದಲ್ಲಿ ೧೩೬ ಪ್ಯಾಕೆಟ್ ೬.೫ ಕೆ.ಜಿ. ಚಿನ್ನಾಭರಣ ಮತ್ತು ೪೧ ಲಕ್ಷ ೪ ಸಾವಿರ ನಗದು ಹಣ ಗುರುವಾರ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್.ಪಿ. ಲಕ್ಷ್ಮಣ ನಿಂಬರಗಿ ಹೇಳಿದರು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಂಗಳವಾರ ಸಂಜೆ ೬.೩೦ ರಿಂದ ೭.೩೦ ಗಂಟೆಯ ಸುಮಾರು ನಡೆದ ಘಟನೆಯಲ್ಲಿ ಎಸ್‌ಬಿಐ ಬ್ಯಾಂಕ್‌ನಿಂದ ಸುಮಾರು ೩೯೮ ಪ್ಯಾಕ್ ೨೦ ಕೆ.ಜಿ. ಚಿನ್ನಾಭರಣ, ೧ ಕೋಟಿ ೪ ಲಕ್ಷ ನಗದು ಹಣ ದರೋಡೆ ಮಾಡಿದ್ದಾರೆ. ಘಟನೆ ನಡೆದ ದಿನ ಮಂಗಳವಾರ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ತಡ ರಾತ್ರಿ ದರೋಡೆಗೆ ಬಳಿಸಿದ ವಾಹನ ಬೈಕ್‌ಗೆ ಅಪಘಾತವಾಗಿ, ಸ್ಥಳೀಯರ ಜೊತೆ ಜಗಳ ಪ್ರಾರಂಭವಾದಾಗ ದರೋಡೆಕೋರರು ಅಲ್ಲಿನ ಸಾರ್ವಜನಿಕರಿಗೆ ಬೆದರಿಸಿ ಕೆಲ ಬ್ಯಾಗಗಳನ್ನು ತೆಗೆದುಕೊಂಡು ದರೋಡೆಗೆ ಬಳಸಿದ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ತಡ ರಾತ್ರಿ ದರೋಡೆಗೆ ಬಳಸಿದ ವಾಹನ ವಶಕ್ಕೆ ಪಡೆದಾಗ ವಾಹನದಲ್ಲಿ ೨೧ ಚಿನ್ನದ ಪಾಕೇಟ್ ೧ ಲಕ್ಷ ೩ ಸಾವಿರ ನಗದು ಹಣ ವಶಕ್ಕೆ ಪಡೆಯಲಾಗಿದೆ. ಮಂಗಳವಾರ ರಾತ್ರಿಯಿಂದ ಹುಲಜಂತಿ ಗ್ರಾಮವನ್ನು ಸೋಲಾಪೂರ ಜಿಲ್ಲಾ ಪೊಲೀಸರು ಮತ್ತು ವಿಜಯಪುರ ಜಿಲ್ಲಾ ಪೊಲೀಸರು ಸಂಪೂರ್ಣ ಸುತ್ತುವರೆದಿದ್ದರಿಂದ ದರೋಡೆಕೋರರು ಸುಮಾರು ೨೫ ಕೆ.ಜಿ. ಭಾರ ಇರುವ ಬ್ಯಾಗ್‌ನ್ನು ಕೊಂಡೊಯ್ಯಲು ಸಾಧ್ಯವಾಗದೇ ಗ್ರಾಮದ ಪಾಳು ಬಿದ್ದ ಮನೆಯೊಂದರ ಮೇಲ್ಛಾವಣಿಯ ಮೇಲೆ ಅಕ್ಕಿ ಮೂಟೆಯಲ್ಲಿ ಚಿನ್ನಾಭರಣ ಹಾಗೂ ನಗದು ಹಣವನ್ನು ಇಟ್ಟು ಪರಾರಿಯಾಗಿದ್ದಾರೆ. ಸ್ಥಳದಲ್ಲಿಯೇ ಬೀಡುಬಿಟ್ಟು ನಡೆಸಿದ ತನಿಖೆಯಿಂದ ಗುರುವಾರ ಸಂಜೆ ಪಾಳು ಬಿದ್ದ ಮನೆಯ ಮೇಲ್ಛಾವಣಿಯ ಮೇಲೆ ಇಟ್ಟಿರುವ ೧೩೬ ಪ್ಯಾಕೆಟ್‌ನಲ್ಲಿದ್ದ ೬.೫. ಕೆ.ಜಿ ಚಿನ್ನಾಭರಣ, ೪೧ ಲಕ್ಷ ೪ಸಾವಿರ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದ ಅವರು, ದರೋಡೆಗೆ ಬಳಸಿದ ವಾಹನ ಕೂಡ ದರೋಡೆಕೋರರು ಕಳ್ಳತನ ಮಾಡಿದ ವಾಹನವಾಗಿದೆ. ಮಹಾರಾಷ್ಟ್ರ ರಾಜ್ಯದ ಮಂಗಳವೇಡಾದಲ್ಲಿ ವಾಹನ ಕಳ್ಳತನ ಕುರಿತು ಪ್ರಕರಣಗಳು ದಾಖಲಾಗಿದೆ ಎಂದರು.

ಮಹಾರಾಷ್ಟ್ರದ ಸೋಲಾಪೂರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳ ಸಹಯೋಗದಲ್ಲಿ ಜಂಟಿಯಾಗಿ ತನಿಖೆ ಚುರುಕು ಗೊಳಿಸಲಾಗಿದೆ. ಶೀಘ್ರದಲ್ಲಿಯೇ ದರೋಡೆಕೋರರ ಬಂಧನ ಮಾಡಲು ಎಲ್ಲ ರೀತಿಯಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ದರೋಡೆಕೋರರನ್ನು ಪತ್ತೆಮಾಡಿ ಮತ್ತು ಉಳಿದ ಮಾಲನ್ನು ವಶಪಡಿಸಿಕೊಳ್ಳಲಾಗುವದು, ದರೋಡೆಕೋರರನ್ನು ಹೆಡೆಮುರಿ ಕಟ್ಟಲು ೮ ತನಿಖಾ ತಂಡಗಳನ್ನು ರಚಿಸಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ನಿಂಬರಗಿ ವಿವರಿಸಿದರು.

ಗಡಿ ಭಾಗದಲ್ಲಿ ತೀವೃಗೊಂಡ ಪೊಲೀಸ್ ತನಿಖೆ
ಚಡಚಣ: ಪಟ್ಟಣದ ಎಸ್.ಬಿ.ಐ ಬ್ಯಾಂಕ್ ದರೋಡೆ ಮಾಡಿದ ಘಟನೆಯ ಹಿನ್ನಲೆಯಲ್ಲಿ ಪಟ್ಟಣದ ಉಮದಿ ಕ್ರಾಸ್ ಬಳಿ ಪೊಲೀಸರು ಎಲ್ಲ ವಾಹನಗಳನ್ನು ತಡೆದು ಪರಿಶೀಲನೆ ನಡೆಸಿ, ಗಡಿ ಭಾಗಗಳಲ್ಲಿ ಹೆಚ್ಚಿನ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಸ್ಥಳೀಯ ಎಸ್‌ಬಿಐ ಬ್ಯಾಂಕಿಗೆ ಇನ್ನೂ ಕೂಡ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ ವ್ಯವಸ್ಥೆ ಮಾಡಲಾಗಿದೆ.