ದೇವರನಿಂಬರಗಿ ಗ್ರಾಮದಲ್ಲಿ ಬೆಳ್ಳಂ ಬೆಳಿಗ್ಗೆ ರೌಡಿ ಶೀಟರ್ ಬರ್ಬರ ಹತ್ಯೆ | ಗ್ರಾ.ಪಂ. ಅಧ್ಯಕ್ಷ ಭೀಮನಗೌಡ ಬಿರಾದಾರ ಕೊಲೆಯಾದ ದುರ್ಧೈವಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಮೀಪದ ದೇವರನಿಂಬರಗಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ರೌಡಿ ಶೀಟರ್‌ನ ಮೇಲೆ ಅಪರಿಚಿತರು ಏಕಾಏಕಿ ಗುಂಡಿನ ದಾಳಿ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ದೇವರನಿಂಬರಗಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ದೇವರನಿಂಬರಗಿ ಗ್ರಾ.ಪಂ. ಅಧ್ಯಕ್ಷ ಭೀಮನಗೌಡ ಕಲ್ಲನಗೌಡ ಬಿರಾದಾರ (೪೦) ಎಂದು ಗುರುತಿಸಲಾಗಿದೆ.
ಭೀಮನಗೌಡ ಬೆಳಿಗ್ಗೆ ಸುಮಾರು ೮:೫೦ ಗಂಟೆಗೆ ದೇವರನಿಂಬರಗಿ ಗ್ರಮದಲ್ಲಿರುವ ಶ್ರೀಮಂತ ಭೀಮಾಶಂಕರ ನಾವಿ ಎಂಬುವವರ ಸಲೂನಿಗೆ ಹೇರ್ ಕಟಿಂಗ್ ಮಾಡಿಸಿಕೊಳ್ಳಲೆಂದು ತೆರಳಿದಾಗ ನಾಲ್ಕು ಜನ ಅಪರಿಚಿತ ಮುಸುಕುಧಾರಿಗಳು ಸಲೂನಿಗೆ ನುಗ್ಗಿ ಮೃತ ಭೀಮನಗೌಡನ ಕಣ್ಣಿಗೆ ಖಾರದ ಪುಡಿ ಎರಚಿ ಆತನ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿ, ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಘಟನೆಯ ಕುರಿತು ಶೋಧ ನಡೆಸಿ, ಆರೋಪಿಗಳನ್ನು ಬಂಧಿಸಿ, ತೀವ್ರ ತನಿಖೆಗೆ ಒಳಪಡಿಸಿದ್ದಾರೆ.
ಸಾಯಂಕಾಲ ಮೃತ ಭೀಮನಗೌಡ ಶರೀರವನ್ನು ದೇವರನಿಂಬರಗಿ ಗ್ರಾಮಕ್ಕೆ ಶವ ಸಂಸ್ಕಾರಕ್ಕಾಗಿ ತರಲಾಗಿದ್ದು, ಗ್ರಾಮಕ್ಕೆ ಭೀಮನಗೌಡನ ಶವ ತರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುತ್ತು. ಶವ ಸಂಸ್ಕಾರದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಇಂಡಿ ಡಿವೈಎಸ್‌ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.
ಪ್ರಕರಣ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನಲೆ
ಮೃತ ಭೀಮನಗೌಡ ಬಿರಾದಾರ ತನ್ನ ಜಮೀನಿನಲ್ಲಿ ಕೆಲಸ ಮಾಡಿಕೊಂಡು ತನ್ನ ಪತ್ನಿ ಹಾಗೂ ಓರ್ವ ಪುತ್ರ, ಪುತ್ರಿಯ ಜೊತೆಗೆ ಜೀವನ ನಡೆಸುತ್ತಿದ್ದು, ಈ ಮೊದಲು ಈತನ ಮೇಲೆ ಚಡಚಣ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ದಾಖಲಾಗಿದೆ. ನಂತರ ೨೦೧೯ರಲ್ಲಿ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ, ದೇವರನಿಂಬರಗಿ ಗ್ರಾ.ಪಂ. ಅಧ್ಯಕ್ಷನಾಗಿದ್ದು, ಗ್ರಾಮದ ಕೆಲ ವ್ಯಕ್ತಿಗಳ ಜೊತೆಗಿನ ಸರಕಾರಿ ಕೆಲಸದ ವಿಷಯವಾಗಿ ಇದ್ದ ವೈಷಮ್ಯವೆ ಈ ಘಟನೆಗೆ ಕಾರಣ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಂಧಿತ ನಾಲ್ವರು ಆರೋಪಿಗಳು
ದೇವರ ನಿಂಬರಗಿಯಲ್ಲಿ ನಡೆದ ಭೀಮನಗೌಡ ಬಿರಾದಾರ ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ಈ ಕೆಳಕಂಡ
೧. ರಜಿವುಲ್ಲಾ ಮಕಾನದಾರ
೨. ವಾಸೀಮ್ ಮನಿಯಾರ
೩. ಪಿರೋಜ್ ಶೇಖ್
೪. ಮೌಲಾಲಿ ಲಾಡ್ಲೆಸಾಬ್
ಈ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

” ದೇವರ ನಿಂಬರಗಿಯಲ್ಲಿ ನಡೆದ ಭೀಮನಗೌಡ ಬಿರಾದಾರ ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ನಾಲ್ವರೂ ಕೊಲೆಯಾದ ಭೀಮನಗೌಡನಿಂದ ತಮಗೆ ತುಂಬ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದು, ಈ ಕುರಿತು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.”
– ಲಕ್ಷ್ಮಣ ನಿಂಬರಗಿ
ಪೊಲೀಸ್ ವರಿಷ್ಠಾಧಿಕಾರಿ, ವಿಜಯಪುರ