ಉದಯರಶ್ಮಿ ದಿನಪತ್ರಿಕೆ
ಇಂಡಿ: ಅತಿವೃಷ್ಟಿ ಮಳೆಯಿಂದ ಬೆಳೆಗಳು ಒಣಗಿ ಹೋಗುತ್ತಿವೆ. ಹೆಸರು, ಉದ್ದು, ಸೊಯಾಬಿನ್, ಹತ್ತಿ, ಮೆಕ್ಕೆಜೋಳ, ಸಜ್ಜೆ ಹಾಗೂ ತೊಗರಿ ಸೇರಿದಂತೆ ಅನೇಕ ಬೆಳೆಗಳು ಒಣಗಿ ಅನ್ನದಾತ ಸಂಕಷ್ಟದಲ್ಲಿದ್ದಾನೆ. ಈ ಕೂಡಲೇ ಹಾನಿಯಾದ ಬೆಳೆ ಸಮಿಕ್ಷೆ ನಡೆಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗಲಿ ಮತ್ತು ವಿಶೇಷ ಪರಿಹಾರ ನೀಡಬೇಕೆಂದು ಶಿರಸ್ತೆದಾರ ಎಸ್ ಆರ್ ಮುಜಗೊಂಡ ಅವರಿಗೆ
ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್) ತಾಲೂಕಾ ಸಮಿತಿಯಿಂದ ಮನವಿ ಸಲ್ಲಿಸಿದರು.
ನಗರದ ತಾಲ್ಲೂಕು ಆಡಳಿತ ಸೌಧದ ಎದುರು ಪ್ರತಿಭಟಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಅಧ್ಯಕ್ಷ ಭೀಮರಾಯ ಪೂಜಾರಿ ಮಾತನಾಡಿ, ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ, ಹೆಸರು ಉದ್ದು, ಸೊಯಾಬಿನ್, ಹತ್ತಿ ಬೆಳೆ, ಮೆಕ್ಕೆಜೋಳ, ಸಜ್ಜೆ ಉತ್ತಮ ಫಸಲು ಬಂದಾಗ ಬಂದರೆ ಮಾತ್ರ. ಆದರೆ ಅದೆ ಬೆಳೆಗಳು ಕೈ ಕೊಟ್ಟಾಗ ಅನ್ನದಾತರ ಬದುಕು ಹಾಗೂ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಏನಾಗಿರಬಾರದು. ಅದಕ್ಕಾಗಿ ಅತ್ಯಂತ ಕಷ್ಟದ ಶೋಚನೀಯ ಪರಿಸ್ಥಿತಿಯಲ್ಲಿರುವ ಅನ್ನದಾತನ ಬದುಕಿಗೆ ಆಶ್ರಯಬೇಕಾಗಿದ್ದು ನಾಗರಿಕ ಸಮಾಜದ ಸರಕಾರದ ಕರ್ತವ್ಯ.
ಈಗ ಕಲಬುರ್ಗಿ ಜಿಲ್ಲೆಯಂತೆ, ವಿಜಯಪುರ ಜಿಲ್ಲೆಯೂ ಅಪಾರ ಪ್ರಮಾಣದಲ್ಲಿ ತೊಗರಿ ಬೆಳೆಯುತ್ತಿದ್ದು, ಅಲ್ಲಿ ಸಿಗುವ ಸೌಲಭ್ಯ ಮತ್ತು ಸವಲತ್ತು ನಮ್ಮ ಜಿಲ್ಲೆಯ ರೈತರಿಗೆ ಸಿಗುವಂತಾಗಬೇಕು.
ನಮ್ಮ ಜಿಲ್ಲೆಯ ರೈತರು ಸಾಲಶೂಲ ಮಾಡಿ ರೈತರು ಬಿತ್ತನೆ ಮಾಡಿದ್ದು, ರಸಗೊಬ್ಬರ ಔಷದಿ ಹಾಗೂ ಇತರೆ ಅತೀ ಹೆಚ್ಚು ಖರ್ಚು ಮಾಡಿ ಸಾಲ ಮಾಡಿದ್ದಾರೆ. ಆದರೆ ಇಂದು ಅತೀಯಾದ ಮಳೆಯಿಂದ ಎಲ್ಲಾ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿವೃಷ್ಠಿ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸಾಲದ ಬಾದೆ ತಾಳಲಾರದೆ ಸರಣಿ ರೈತರ ಆತ್ಮಹತ್ಯೆಯ ಪ್ರಕರಣಗಳು ದಿನೆ ದಿನೆ ಹೆಚ್ಚಾಗುತ್ತಿವೆ.
ಇನ್ನು ಅತಿವೃಷ್ಠಿ ಮಳೆಯಿಂದ ತಾಲ್ಲೂಕಿನಾದ್ಯಾಂತ ಬಡವರ ಮನೆಗಳು ಬಿದ್ದಿವೆ, ಸರ್ಕಾರಿ ಉರ್ದು ಶಾಲೆಗಳು ಸೋರುತ್ತಿವೆ ಹಾಗೂ ಶಿಥಿಲಾವಸ್ಥೆಯಲ್ಲಿದ್ದು, ಇದರ ಬಗ್ಗೆ ಸರಿಯಾದ ಸಮೀಕ್ಷೆ ಮಾಡಿ ಎಲ್ಲಾ ಶಾಲೆಗಳನ್ನು ದುರಸ್ತಿ ಮತ್ತು ಹೊಸದಾಗಿ ಕಟ್ಟಡ ನಿರ್ಮಾಣ ಮಾಡಬೇಕು ಹಾಗೂ ಹದಗೆಟ್ಟಿರುವ ರಸ್ತೆಗಳು ಸುಧಾರಣೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.

