ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ೨೯ ಅಂಶ ಕಾರ್ಯಕ್ರಮ | ಡಿಡಿಪಿಐ ವ್ಹಿ.ವ್ಹಿ.ಸಾಲಿಮಠ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸುತ್ತಿರುವ ಶಿಕ್ಷಣ ಇಲಾಖೆಯು, ಅದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಶಾಲೆಗಳಲ್ಲಿ ಈಗಾಗಲೇ ೨೯ ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ಇಲಾಖೆ, ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಮತ್ತು ಒತ್ತಡ ನಿವಾರಣೆಗೆ ವಿಶೇಷ ಒತ್ತುಕೊಟ್ಟಿದೆ.
ಕಟ್ಟು ನಿಟ್ಟಿನ ಜಾರಿ: ‘ಈ ಸಾಲಿನ ಫಲಿತಾಂಶದಲ್ಲಿ ಜಿಲ್ಲೆಯನ್ನು ಅಗ್ರ ೫ ಸ್ಥಾನದೊಳಗೆ ತರುವಗುರಿ ಹೊಂದಿದ್ದೇವೆ. ಅದಕ್ಕಾಗಿ ೨೯ ಅಂಶಗಳ ಕಾರ್ಯಕ್ರಮಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವ್ಹಿ.ವ್ಹಿ.ಸಾಲಿಮಠರವರು ಹೇಳಿದರು.
ಬಿಜಿಬಂವ್ಹಿ ಸಂಘದ ದಿ.ಪ್ರಭಾಕರ ಮೆಮೋರಿಯಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕುರಿತು ವಿಜಯಪುರ ನಗರ ವಲಯದ ಮುಖ್ಯ ಗುರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು.
‘ಜಿಲ್ಲೆಯಲ್ಲಿ ನಾಲ್ಕು ಬ್ಲಾಕ್‌ಗಳ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಈ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು. ಡಿಸೆಂಬರ್ ಅಂತ್ಯಕ್ಕೆ ಎಲ್ಲಾ ಪಾಠಗಳ ಬೋಧನೆ ಮುಗಿಸಬೇಕು. ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡುವತ್ತ ಗಮನ ಹರಿಸಬೇಕು ಎಂದರು.
ಪ್ರೇರಣಾ ತರಗತಿ: ‘ಪ್ರತಿ ಪಾಠಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಕಾರ್ಯಕ್ರಮ, ವಾರಕ್ಕೆರಡು ದಿನ ಮಕ್ಕಳ ಸಂದೇಹ ನಿವಾರಣೆ ತರಗತಿ, ಮುಖ್ಯ ಪರೀಕ್ಷೆಗೆ ಬರಬಹುದಾದ ಪ್ರಶ್ನೆಗಳನ್ನು ಮಕ್ಕಳಿಗೆ ನಿತ್ಯವೂ ನೀಡಿಅಭ್ಯಾಸ ಮಾಡಿಸಬೇಕು. ಇವೆಲ್ಲದಕ್ಕಿಂತ ಮುಖ್ಯವಾಗಿ ಮಕ್ಕಳಲ್ಲಿ ಪರೀಕ್ಷಾ ಭಯ ಮತ್ತುಒತ್ತಡ ನಿವಾರಣೆಗೆ ಮನಶಾಸ್ತçಜ್ಞರು ಮತ್ತು ವಿಷಯತಜ್ಞರಿಂದ ಪ್ರೇರಣಾ ತರಗತಿ ನಡೆಸಬೇಕು. ಇದರಿಂದ ಮಕ್ಕಳಲ್ಲಿ ಪರೀಕ್ಷೆ ಭಯದ ಬದಲು, ಅದನ್ನು ಎದುರಿಸುವ ಉತ್ಸಾಹತುಂಬಬೇಕು ಎಂದರು.
‘ಕಲಿಕಾ ಪ್ರಗತಿ ಬಗ್ಗೆ ಪೋಷಕರೊಂದಿಗೆ ಸಭೆ’-‘ಕಲಿಕೆಯಲ್ಲಿ ಮಂದಗತಿ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳನ್ನು ಗುರುತಿಸಿರುವ ಶಿಕ್ಷಕರು ಅಂತಹವರ ಮನೆಗೆ ಭೇಟಿ ನೀಡಬೇಕು. ಮನೆಯಲ್ಲಿ ಮಕ್ಕಳ ಅಭ್ಯಾಸ ಸುಧಾರಣೆ ಕುರಿತು ಪೋಷಕರ ಜೊತೆ ಚರ್ಚಿಸಿ ಸಲಹೆ ನೀಡಬೇಕು. ಶಾಲೆಯಲ್ಲಿ ನಡೆಸುವ ಪರೀಕ್ಷೆಗಳ ಮೌಲ್ಯಮಾಪನದ ನಂತರ ಪೋಷಕರನ್ನು ಕರೆಯಿಸಿ ಮಕ್ಕಳ ಉತ್ತರ ಪತ್ರಿಕೆ ಸಮೇತ ಫಲಿತಾಂಶವನ್ನು ಅವರೊಂದಿಗೆ ಹಂಚಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಗರ ವಲಯಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜೆ.ಬಿರಾದಾರ, ಕ್ಷೇತ್ರ ಸಮನ್ವಯ ಅಧಿಕಾರಿ ಎ.ಆರ್.ದರ್ಗಾ, ಕನ್ನಡ ವಿಷಯ ಪರಿವೀಕ್ಷಕರು ಹಾಗೂ ನೋಡಲ್ ಅಧಿಕಾರಿ ಶಿವಾನಂದ ಬ್ಯಾಹಟ್ಟಿ, ಇಸಿಓ ಎಲ್.ಎಸ್.ಬಿರಾದಾರ, ಶಿಕ್ಷಣ ಸಂಯೋಜಕ ಪ್ರಕಾಶ ನಾಲತ್ವಾಡ, ಪೇಮಾ ಹಿರೇಮಠ, ಎ.ಕೆ.ದಳವಾಯಿ, ಸಿಆರ್‌ಪಿ ಬಿ.ಎ. ಬಿರಾದಾರ, ಮುಖ್ಯೋಪಾಧ್ಯಾಯ ಇ.ಡಿ.ಲಮಾಣಿ ಹಾಗೂ ಸಂದೀಪ ರಾಠೋಡರವರುಗಳು ಸೇರಿದಂತೆ ನಗರ ವಲಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಮುಖ್ಯೋಪಾಧ್ಯಾಯರುಗಳು ಉಪಸ್ಥಿತರಿದ್ದರು.
ಪ್ರಮುಖ ಸುಧಾರಣಾ ಅಂಶಗಳು
ಪ್ರತಿಘಟಕದ ಪಾಠ ಬೋಧನೆ ಮುಗಿದ ಬಳಿಕ ಆ ಘಟಕಕ್ಕೆಕಿರು ಪರೀಕ್ಷೆ ನಡೆಸುವುದು. ಮಕ್ಕಳಿಗೆ ಘಟಕಗಳ ಸತತ ಓದುವಿಕೆಯಿಂದ ಸ್ಥಿರವಾದ ಪುನರಾವರ್ತನೆ ಪ್ರಕ್ರಿಯೆ ನಡೆಸುವುದು. ವಿದ್ಯಾರ್ಥಿಗಳಿಗೆ ಓದುವ ಪ್ರಕ್ರಿಯೆ ಜೊತೆಗೆ ಬರವಣಿಗೆಗೂ ಒತ್ತು ನೀಡಬೇಕು.
ಕಲಿಕಾ ಮಟ್ಟಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಮನೆಯಲ್ಲಿ ಓದಲು ವಿವಿಧ ವಿಷಯಗಳ ವೇಳಾಪಟ್ಟಿ ತಯಾರಿಸಿ ಓದುವ ಅವಧಿ ನಿಗದಿಪಡಿಸುವುದು.
ಮಕ್ಕಳಿಂದ ವಿಷಯವಾರು ಪಾಠವಾರು ಹಾಗೂ ಅಂಕವಾರು ಪ್ರಶ್ನೆಕೋಶ ಸಿದ್ಧಪಡಿಸುವುದು. ಸರಾಸರಿ ಮತ್ತು ನಿಧಾನಗತಿ ಕಲಿಕೆಯ ಮಕ್ಕಳ ಗುಂಪು ರಚಿಸಿ ಶಿಕ್ಷಕರಿಗೆ ದತ್ತು ನೀಡುವುದು.
ಶಾಲಾರಂಭಕ್ಕೆ ಮುಂಚೆ ನಿತ್ಯಒಂದು ವಿಷಯಕ್ಕೆ ಅರ್ಧ ಗಂಟೆಯಂತೆ ಎರಡು ವಿಷಯಗಳಿಗೆ ಗುಂಪಿನ ಉಸ್ತುವಾರಿ ಶಿಕ್ಷಕರ ನೇತೃತ್ವದಲ್ಲಿ ವಿಶೇಷ ತರಗತಿ ಆಯೋಜನೆ. ತರಗತಿ ಮುಗಿದ ಬಳಿಕ ಅರ್ಧ ಗಂಟೆ ಒಂದು ವಿಷಯದ ಕುರಿತು ಗುಂಪು ಅಧ್ಯಯನ ಮಾಡಿಸುವುದು.