ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಶಾಂತಿ ಸಭೆಯು ಪಟ್ಟಣದ ಪೊಲೀಸ್ ಠಾಣಾ ಅವರಣದಲ್ಲಿ ಜರುಗಿತು.
ಪಿಎಸ್‌ಐ ರೇಣುಕಾ ಹಳ್ಳಿ ಮಾತನಾಡಿ, ಗಣೇಶ ಪ್ರತಿಷ್ಠಾಪನೆಗೆ ಸಂಬಂಧಪಟ್ಟ ಇಲಾಖೆಗಳಿಂದ ಪರವಾನಿಗೆ ಕಡ್ಡಾಯ, ಮೂರ್ತಿ ಪ್ರತಿಷ್ಠಾಪನೆ ಬಳಿಕ ಪ್ರತಿದಿನ ಮೂರ್ತಿಯನ್ನು ಕಾಯಲು 1-2 ಮಂದಿ ಕಡ್ಡಾಯವಾಗಿ ಇರತಕ್ಕದ್ದು ವಿಸರ್ಜನೆ ವೇಳೆ ಕರ್ಕಶ ಡಿಜೆ ನಿಷೇಧ ಎಂದು ಸ್ಪಷ್ಟ ಸೂಚನೆ ನೀಡಿದರು.
ಈದ್ ಮಿಲಾದ್ ಮೆರವಣಿಗೆಯೂ ಶಾಂತಿಯುತವಾಗಿರಬೇಕು, ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಶಾಂತ ರೀತಿಯಿಂದ ಯಾವುದೇ ಧರ್ಮಕ್ಕೆ ತೊಂದರೆಯಾಗದಂತೆ, ಹಿಂದೂ-ಮುಸ್ಲಿಂ ಸಹೋದರತ್ವ ಕಾಪಾಡಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವೀರೇಶ ಹಟ್ಟಿ ಮಾತನಾಡಿ ಪಿಒಪಿ ಗಣೇಶ ಮೂರ್ತಿಗಳನ್ನು ಯಾರು ಕೂಡ ಮಾರಾಟ ಮಾಡಬಾರದು ಅದರಿಂದ ಪರಿಸರ ನಾಶವಾಗುತ್ತದೆ. ಪಟ್ಟಣ ಪಂಚಾಯಿತಿಯಿಂದ ಮನೆಗಳ ಗಣಪತಿ ವಿಸರ್ಜನೆಗೆ ಮೊಬೈಲ್ ಟ್ಯಾಂಕರ್ ಗಳು ಮತ್ತು ಸಾರ್ವಜನಿಕ ಗಣೇಶ ವಿಸರ್ಜನೆಗೆ ಬೇಕಾದಲ್ಲಿ ಬೇರೆ ಸ್ಥಳಗಳಲ್ಲಿ ಒಂದು ದೊಡ್ಡದಾದ ಕೃತಕ ನೀರಿನ ಟ್ಯಾಂಕ್ ವ್ಯವಸ್ಥೆ ಕಲ್ಪಿಸಲಾಗುವುದು ಎಲ್ಲರೂ ಪರಿಸರವನ್ನು ಹಾಳು ಮಾಡದೆ ಇದರ ಉಪಯೋಗ ಪಡೆದುಕೊಳ್ಳಿ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ತಹಶೀಲ್ದಾರ ಸಂತೋಷ್ ಮ್ಯಾಗೇರಿ ಮಾತನಾಡಿ ಎಲ್ಲರೂ ಸೌಹಾರ್ದತೆ ಮತ್ತು ಸಹಬಾಳ್ವೆಯಿಂದ ಹಬ್ಬ ಹರಿದಿನಗಳನ್ನು ಆಚರಣೆ ಮಾಡೋಣ ಎಂದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ಸಿ.ಎಸ್. ಗಿಡ್ಡಪ್ಪಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫಿಕ ಪಕಾಲಿ, ಹನೀಫ್ ಮಕಾಂದಾರ ಸೇರಿದಂತೆ ಗಣೇಶ ಯುವಕ ಮಂಡಳಿಗಳ ಸದಸ್ಯರು, ಪಟ್ಟಣದ ಹಿರಿಯರು ಭಾಗವಹಿಸಿದ್ದರು.