ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಮಾದಿಗ ಸಮಾಜ ಬಾಂಧವರು ಸೋಮವಾರ ಸಂಜೆ ಆ.೧೯ ರಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನ್ಯಾಯಮೂರ್ತಿ ನಾಗಮೋಹನ ದಾಸ ಆಯೋಗದ ವರದಿಯನ್ನು ಸಿಎಂ, ಡಿಸಿಎಂ, ಸಚಿವ ಶಿವಾನಂದ ಪಾಟೀಲ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಮೂಲಕ ಸಲ್ಲಿಸಿದರು.
ಮನವಿ ಪತ್ರವನ್ನು ಗ್ರೇಡ್-೨ ತಹಸೀಲ್ದಾರ ಅರಕೇರಿ ಸ್ವೀಕರಿಸಿದರು.
ಅವರು ಸಲ್ಲಿಸಿದ ಮನವಿಯಲ್ಲಿ ಮಾದಿಗ ಸಂಬಂಧಿತ ಜನಾಂಗದ ವಿವಿಧ ಸಂಘಟನೆಗಳು ಸು.೩೫-೪೦ ವರ್ಷಗಳಿಂದ ಸತತವಾಗಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಸಲುವಾಗಿ ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿವೆ. ಒಳಮೀಸಲಾತಿಗಾಗಿ ಹೋರಾಟ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಹೋರಾಟದಲ್ಲಿ ಭಾಗವಹಿಸಲು ಹೋಗುವಾಗ ನಡೆದ ಅಪಘಾತದಲ್ಲಿ ಬಸವನಬಾಗೇವಾಡಿಯಲ್ಲಿ ಏಳು ಜನರು ಮೃತಪಟ್ಟಿದ್ದಾರೆ. ಅಲ್ಲದೇ ರಾಜ್ಯದ ಇತರೇ ಜನರು ಸಹ ಒಳಮೀಸಲಾತಿಗಾಗಿ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಆಡಳಿತಕ್ಕೆ ಬಂದರೂ ಮಾದಿಗ ಜನಾಂಗಕ್ಕೆ ಮೂಗಿಗೆ ತುಪ್ಪ ಒರೆಸುವ ಕಾರ್ಯ ಮಾಡುತ್ತಾ ಬರಲಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಣಾಳಿಕೆಯಲ್ಲಿ ಪಕ್ಷಗಳು ಒಳಮೀಸಲಾತಿ ಜಾರಿಗೆ ತರುವ ಬಗ್ಗೆ ಹೇಳುತ್ತವೆ. ಸುಪ್ರಿಂ ಕೋರ್ಟ್ ಒಳಮೀಸಲಾತಿ ನೀಡುವ ಅಽಕಾರ ಆಯಾ ರಾಜ್ಯ ಸರ್ಕಾರಕ್ಕೆ ಇದೆ ಎಂದು ನಿರ್ದೇಶನ ನೀಡಿ ಒಂದು ವರ್ಷವಾದರೂ ಮಾದಿಗ ಸಮಾಜ ಬಾಂಧವರಿಗೆ ನ್ಯಾಯ ಸಿಕ್ಕಿಲ್ಲ. ಆ.೧೯ ರಂದು ನಡೆಯುವ ವಿಶೇಷ ಸಚಿವ ಸಂಪುಟದಲ್ಲಿ ನ್ಯಾ.ನಾಗಮೋಹನ ದಾಸ ಆಯೋಗದ ವರದಿಯನ್ನು ಜಾರಿಗೆ ಗೊಳಿಸುವ ಮೂಲಕ ಮಾದಿಗ ಸಮಾಜ ಬಾಂಧವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಮುಖಂಡರಾದ ಸಂಜೀವ ಕಲ್ಯಾಣಿ, ಅರವಿಂದ ಸಾಲವಾಡಗಿ, ವೈ.ಎಸ್.ಮ್ಯಾಗೇರಿ, ಅಶೋಕ ಕರೆಕಲ್ಲ,ತಮ್ಮಣ್ಣ ಕಾನಾಗಡ್ಡಿ, ಆರ್.ಬಿ.ಮ್ಯಾಗೇರಿ ಇದ್ದರು.