ಉದಯರಶ್ಮಿ ದಿನಪತ್ರಿಕೆ
ವರದಿ: ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನಕ್ಕೆ ಪವಿತ್ರ ಶ್ರಾವಣ ಮಾಸದ ಕೊನೆಯ ಸೋಮವಾರವಾದ ಇಂದು ಮಳೆ ಬರುತ್ತಿದ್ದರೂ ರಾಜ್ಯದ ವಿವಿಧೆಡೆಗಳಿಂದ ಅಪಾರ ಪ್ರಮಾಣದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡು ಧನ್ಯತೆ ಅನುಭವಿಸಿದರು.
ಬೆಳಗ್ಗೆ ಮೂಲನಂದೀಶ್ವರನಿಗೆ ರುದ್ರಾಭಿಷೇಕ, ವಿಶೇಷ ಪೂಜೆಯನ್ನು ಗೌರಿಶಂಕರ ಚರಂತಿಮಠ ನೆರವೇರಿಸಿದರು. ಅಪಾರ ಪ್ರಮಾಣದ ಜನರು ದೇವಸ್ಥಾನದ ಸುತ್ತ ದೀಡ್ ನಮಸ್ಕಾರ, ಉರುಳುಸೇವೆ ಹಾಕಿ ತಮ್ಮ ಹರಕೆ ಸಲ್ಲಿಸಿದರು. ಅಪಾರ ಜನರು ಮೂಲನಂದೀಶ್ವರ ದೇವರಿಗೆ ರುದ್ರಾಭಿಷೇಕ ಮಾಡಿಸಿ ಕಾಯಿ-ಹಣ್ಣು, ಕರ್ಪೂರ ಸಲ್ಲಿಸಿ ಭಕ್ತಿಯನ್ನು ಸಮರ್ಪಿಸಿದರು. ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ಆಗಾಗ ಮಳೆ ಬಿಟ್ಟು ಬಿಡದೇ ಬರುತ್ತಿದ್ದರೂ ದೇವಸ್ಥಾನದ ದರ್ಶನಕ್ಕೆ ಕೆಲ ಜನರು ಮಳೆಯಲ್ಲಿಯೇ ನೆನೆದುಕೊಂಡು ಬಂದರೆ ಕೆಲವರು ಛತ್ರಿ ಹಿಡಿದುಕೊಂಡು ಬಂದರು. ಮಧ್ಯಾನ್ಹ ಒಂದು ಗಂಟೆಯಿಂದ ಮೂರು ಗಂಟೆಯಿಂದ ಮಳೆ ವಿರಾಮ ನೀಡಿದ್ದರಿಂದ ದೇವಸ್ಥಾನದಲ್ಲಿ ಹೆಚ್ಚು ಜನರು ಕಂಡುಬಂದರು. ಜಾತ್ರೆಯಂಗವಾಗಿ ಹಾಕಲಾಗಿದ್ದ ವಿವಿಧ ಅಂಗಡಿಗಳಲ್ಲಿ ಮಳೆಯಲ್ಲಿ ಹೋಗಿ ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವದು ಕಂಡುಬಂದಿತ್ತು. ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬಸವನಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರದಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.