ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
17 ನೆಯ ಶರಣಮಾಸದ ಮಾಲಿಕೆಯಲ್ಲಿ ಶ್ರೀ ವಿಜಯಕುಮಾರ ತೇಲಿ ಅವರು ಮುರಿಗೆಪ್ಪ ಚೆಟ್ಟಿ ಅವರ ಬಗೆಗೆ ಅತ್ಯಂತ ಸವಿಸ್ತಾರವಾಗಿ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟರು.
ಮೊದಲಿಗೆ ಮನುಷ್ಯನ ಮನಸ್ಸಿನ ವಿಸ್ತಾರ, ಅಭಿವ್ಯಕ್ತಿ ಪ್ರಸ್ತುತೀಕರಣ, ರಸಗ್ರಹಣ, ಸಂವೇದನೆ, ಆಸ್ವಾದನೆ, ಅನುಭೂತಿ, ಚಿಂತನ-ಮಂಥನದ ಜೊತೆಗೆ ಕಲೆ, ನೆಲೆ, ಹಿನ್ನೆಲೆಯಾದಿಯಾಗಿ ಲಲಿತ ಕಲೆಗಳ ಬಗೆಗೆ,ಮತ್ತು ಭಾರತೀಯ ಕಲಾಪರಂಪರೆ ಶ್ರೇಷ್ಠವಾದದ್ದು ಎಂದು ಪೀಠಿಕೆಯಾಗಿ ಮಾತನಾಡಿದರು.
ಮುರಿಗೆಪ್ಪ ಚೆಟ್ಟಿ ಅವರ ಬಾಲ್ಯ, ತಂದೆ-ತಾಯಿ, ಅವರ ಹುಟ್ಟೂರು, ಶಿಕ್ಷಣದ ಬಗೆಗೆ ಹೇಳುತ್ತಾ, ಹೇಗೆ ಅವರು ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ಗೋಡೆಯ ಮೇಲೆ, ನೆಲದ ಮೇಲೆ ಚಿತ್ರ ಬಿಡಿಸುತ್ತಿದ್ದುದು,ಸರಕಾರಿ ನೌಕರಿಯಲ್ಲಿದ್ದ ಅವರ ಚಿಕ್ಕಪ್ಪನವರ ಸಹಾಯದಿಂದ ಮುಲ್ಕಿ ಪರೀಕ್ಷೆ, ಇಂಟರಮೀಡಿಯಟ್ ಡ್ರಾಯಿಂಗ್ ಎಕ್ಸಾಮ್ ಪಾಸಾಗಿದ್ದು, ಮ್ಯಾಟ್ರಿಕ್ ಪರೀಕ್ಷೆ ಬರೆದದ್ದು,ನಂತರದಲ್ಲಿ ಬೆಂಬಳಗಿ ಅವರ ಪ್ರೋತ್ಸಾಹದೊಂದಿಗೆ ಮುಂಬೈನ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ್ ಸೇರಿದ್ದು, ಅಲ್ಲಿ ಏಳು ಜನ ಕನ್ನಡಿಗರ ಜೊತೆಗೆ ಸಪ್ತವರ್ಣದ ಗುಂಪು ರಚನೆ ಮಾಡಿದ್ದು, ಶಿರಸಂಗಿ ಲಿಂಗರಾಜ ಟ್ರಸ್ಟ್ ಸಹಾಯ ಪಡೆದದ್ದು, ಚಿತ್ರಮಯ ಜಗತ್ತು ಎಂಬ ಮರಾಠಿ ಪತ್ರಿಕೆಯಲ್ಲಿ ವಿಶ್ವರೂಪ ದರ್ಶನ ಎಂಬ ಚಿತ್ರ ಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಸುಂದರಮ್ಮ ಅವರ ಜೊತೆಗೆ ಮದುವೆ, ಮಕ್ಕಳ ಬಗೆಗೆ, ಕೊನೆಯಲ್ಲಿ ಗದಗನಲ್ಲಿ ವಾಸ್ತವ್ಯ ಹೂಡಿದ್ದನ್ನು ನಮ್ಮ ಜೊತೆಗೆ ಹಂಚಿಕೊಂಡರು.
ಮುರಿಗೆಪ್ಪ ಚೆಟ್ಟಿಯವರು ತಮ್ಮ ಜೀವನದ 75 ವರ್ಷವೂ ಕಲಾಕೃತಿಗಳನ್ನು ರಚಿಸುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆನ್ನುವುದು, ಅವರ ಚಿತ್ರಕಲೆಯಲ್ಲಿ ಕಾಣುವ ವರ್ಣ ಸಂಯೋಜನೆ, ಬೆಳಕಿನ ಸಂಯೋಜನೆ, ಭೌಗೋಳಿಕ ಪ್ರದೇಶ, ಸೂರ್ಯೋದಯ ಚಂದ್ರೋದಯ, ನಿಸರ್ಗದತ್ತ ಪರಿಸರದ ಬಳಸುವಿಕೆಯ ಚಾಕಚಕ್ಯತೆಯನ್ನು ಬಣ್ಣಿಸಿದರು.
ಬಸವಣ್ಣನವರು ಅಕ್ಕಮಹಾದೇವಿ, ಚೆನ್ನಬಸವಣ್ಣ, ಕದಿರೆ ರೆಮ್ಮವ್ವೆ ಆಯ್ದಕ್ಕಿ ಲಕ್ಕಮ್ಮ ಸಿದ್ದರಾಮಯ್ಯೇಶ್ವರರು, ಅಲ್ಲಮಪ್ರಭುಗಳು, ಹಾವಿನಾಳ ಕಲ್ಲಯ್ಯ, ಸಕಲೇಶ ಮಾದರಸ, ಮೋಳಿಗೆ ಮಹದೇವ, ಡೋಹರ ಕಕ್ಕಯ್ಯ, ಮರುಳ ಶಂಕರ ದೇವರು ಕರಿಕಾಲಮ್ಮೆ, ಹೀಗೆ ಅಸಂಖ್ಯಾತ ಶರಣ ಪರಂಪರೆಯ ಚಿತ್ರಗಳನ್ನು ರಚಿಸಿದ್ದು, ಮೂರುಸಾವಿರ ಮಠದ ಕತೃ, ತೋಂಟದಾರ್ಯ ಸಿದ್ದೇಶ್ವರ ಪುರಾಣದ ಚಿತ್ರಗಳ ಜೊತೆಗೆ ನೂರಾರು ಚಿತ್ರಗಳನ್ನು ರಚಿಸಿದ ಹೆಗ್ಗಳಿಕೆ ಇವರದು ಎನ್ನುವುದನ್ನು ಅರುಹಿದರು.
ಮುರಿಗೆಪ್ಪ ಚೆಟ್ಟಿ ಅವರಿಗೆ ಜಾನಪದ ಸಮ್ಮೇಳನದಲ್ಲಿ, ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಶನದಲ್ಲಿ ಲಲಿತಕಲಾ ಅಕಾಡೆಮಿಯಲ್ಲಿ ಸನ್ಮಾನ, ರಾಜ್ಯೋತ್ಸವ ಪ್ರಶಸ್ತಿ ವೆಂಕಟಪ್ಪ ಆಚಾರ್ಯ ಪ್ರಶಸ್ತಿ, ಮೈಸೂರು ದಸರಾದಲ್ಲಿ ಇವರ ಚಿತ್ರಕಲೆ ವಸ್ತುಪ್ರದರ್ಶನವನ್ನು ಹೇಳುತ್ತಾ, ಅವರ ಅಗಾಧ ವ್ಯಕ್ತಿತ್ವಕ್ಕೆ ತಕ್ಕ ಹಾಗೆ ಅವರಿಗೆ ಪ್ರಚಾರ ಸಿಗಲಿಲ್ಲ, ಅವರಿಗೆ ಸರ್ಕಾರದ ಯಾವ ಸೌಲಭ್ಯ ಗಳೂ ಲಭ್ಯವಾಗಲಿಲ್ಲ, ಅವರ ಅತ್ಯದ್ಭುತವಾದ ಬಹಳಷ್ಟು ಚಿತ್ರಗಳನ್ನು ನಾವು ಉಳಿಸಿ ಕೊಳ್ಳಲಾಗಲಿಲ್ಲ ಎನ್ನುವ ವಿಷಾದ ವ್ಯಕ್ತಪಡಿಸಿದರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಮುರಿಗೆಪ್ಪ ಚೆಟ್ಟಿ ಅವರು ಸಿಂಹಾಸನಾರೂಢ ಮತ್ತು ಅಶ್ವಾರೂಢ ಬಸವಣ್ಣನವರ ಚಿತ್ರವನ್ನು ಮೊದಲು ರಚಿಸಿದ ಮಹಾನುಭಾವರು ಎಂದು ಹೆಮ್ಮೆಯಿಂದ ಹೇಳುತ್ತಾ, ಅವರ ಸರಳ ವ್ಯಕ್ತಿತ್ವವನ್ನು ಬಿಂಬಿಸಿದರು.
ಅವರನ್ನು ಯಾರೂ ಸಹ ನಮ್ಮವರೆಂದು ಅಪ್ಪಿಕೊಳ್ಳಲಿಲ್ಲ,ಸಹಾಯ ಮಾಡಲಿಲ್ಲ ಮತ್ತು ಅವರ ಕನಸನ್ನು ನನಸು ಮಾಡಲಿಲ್ಲ ಎನ್ನುವ ಕಳವಳ ವ್ಯಕ್ತಪಡಿಸಿದರು.
ಚೆಟ್ಟಿ ಅವರು ರವಿವರ್ಮನಿಗೆ ಸರಿಸಮಾನವಾದ ವ್ಯಕ್ತಿತ್ವವುಳ್ಳವರು ಎಂದು ಹೆಮ್ಮೆಯಿಂದ ಹೇಳಿದರು.
ದತ್ತಿ ದಾಸೋಹಿಗಳಾದ ಶಿವಾನಂದ ಕಲಕೇರಿ ಅವರು ಇಂದಿನ ಉಪನ್ಯಾಸದ ಅಗಾಧತೆಯ ಬಗೆಗೆ ತಮ್ಮ ಅರ್ಥವತ್ತಾದ ಮಾತುಗಳಿಂದ ಮೆಚ್ಚುಗೆ ವ್ಯಕ್ತಪಡಿಸಿದರು.
ಶರಣೆ ಏಂಜಲಿನಾ ಗ್ರೆಗರಿ ಅವರ ವಚನ ಪ್ರಾರ್ಥನೆ, ಪ್ರೊ ನಾಗರಾಜ ಕೋಟಗಾರ ಅವರ ಸ್ವಾಗತ, ಶರಣೆ ರೋಹಿಣಿ ಜತ್ತಿ ಅವರ ಶರಣು ಸಮರ್ಪಣೆ, ಶರಣೆ ಸುಮಂಗಲಾ ಅಣ್ಣಿಗೇರಿ ಅವರ ವಚನ ಮಂಗಳ ಮತ್ತು ಡಾ. ಶಾರದಾಮಣಿ ಹುಣಶಾಳ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ನಡೆಯಿತು.
ವಿಶೇಷ ದತ್ತಿ ಉಪನ್ಯಾಸ – 315
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶ್ರೀ ಶಿವಾನಂದ ಕಲಕೇರಿ ಆಯುಕ್ತರು, ಆದಾಯ ತೆರಿಗೆ ಇಲಾಖೆ ಬೆಂಗಳೂರು ಇವರ ತಂದೆ ಲಿಂ. ಹಣಮಂತರಾಯ ಕಲಕೇರಿ ಮತ್ತು ಲಿಂ.ಗಿರಿಜಾದೇವಿ ಕಲಕೇರಿ ಅವರ ಸ್ಮರಣಾರ್ಥ ವಿಶೇಷ ದತ್ತಿ ಉಪನ್ಯಾಸ – 315


