ಪಪೂ ಕಾಲೇಜುಗಳ ಅಥ್ಲೆಟಿಕ್ಸ ಕ್ರೀಡಾಕೂಟ ಹಾಗೂ ಬಾಲ್ ಬ್ಯಾಡ್ಮಿಂಟನ್ ಟೆನ್ನಿಸ್ ವ್ಹಾಲಿಬಾಲ್ ಪಂದ್ಯಾವಳಿ
ಬಸವನಬಾಗೇವಾಡಿ: ಕ್ರೀಡೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ. ಕ್ರೀಡೆಯಲ್ಲಿ ಕ್ರೀಡಾಮನೋಭಾವ, ಹೃದಯವೈಶಾಲ್ಯತೆಯಿಂದ ಭಾಗವಹಿಸುವುದು ಮುಖ್ಯ. ಗ್ರಾಮೀಣ ಮಟ್ಟದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಮಿಂಚುವಂತಾಗಲಿ ಎಂದು ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಹಾಗೂ ಬಸವೇಶ್ವರ ಸರ್ಕಾರಿ ಪಪೂ ಕಾಲೇಜಿನ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕು ಪಪೂ ಕಾಲೇಜುಗಳ ಅಥ್ಲೇಟಿಕ್ಸ ಕ್ರೀಡಾಕೂಟ ಹಾಗೂ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಟೆನ್ನಿಸ್ ವ್ಹಾಲಿಬಾಲ್ ಪಂದ್ಯಾವಳಿಯನ್ನು ಸಸಿಗೆ ನೀರುಣಿಸಿ ಉದ್ಘಾಟಿಸಿದ ನಂತರ ಕ್ರೀಡಾಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕ್ರೀಡೆಯು ಯಾರ ಸ್ವತ್ತಲ್ಲ. ಯಾರೂ ಛಲದಿಂದ ಕ್ರೀಡೆಯಲ್ಲಿ ತೊಡಗಿಕೊಳ್ಳುತ್ತಾರೋ ಅವರಿಗೆ ಕ್ರೀಡೆ ಒಲಿಯುತ್ತದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಯಲ್ಲಿ ನಿರಂತರ ಅಧ್ಯಯನದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಬೇಕು ಎಂದರು.
ಕ್ರೀಡಾ ಜ್ಯೋತಿ ಸ್ವೀಕರಿಸಿದ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಇಂದು ಸ್ಪರ್ಧಾತ್ಮಕ ಯುಗವಾಗಿರುವದರಿಂದಾಗಿ ಪಾಲಕರು ತಮ್ಮ ಮಕ್ಕಳು ಹೆಚ್ಚು ಅಂಕ ಪಡೆಯಬೇಕೆಂಬ ಧಾವಂತದಲ್ಲಿ ಕ್ರೀಡಾಕೂಟಕ್ಕೆ ಒತ್ತು ನೀಡದೇ ಇರುವದನ್ನು ನೋಡುತ್ತೇವೆ.ಇಂದು ಸಾಕಷ್ಟು ಸೌಲಭ್ಯಗಳು ಇರುವದರಿಂದಾಗಿ ಇದರ ಸದುಪಯೋಗಪಡೆದುಕೊಂಡು ವಿದ್ಯಾರ್ಥಿಗಳು ಉತ್ತಮ ಕ್ರೀಡಾಪಟುಗಳಾಗಿ ನಾಡಿನ,ದೇಶದ ಕೀರ್ತಿಯನ್ನು ತರಬೇಕೆಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಎಸ್.ಡಿ.ಪಾಟೀಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಪೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಬಿ.ಕೆ.ಕಲ್ಲೂರ, ಅನಿಲ ಅಗರವಾಲ, ಸುರೇಶ ಹಾರಿವಾಳ, ಶೇಖರ ಗೊಳಸಂಗಿ, ಶಂಕರಗೌಡ ಬಿರಾದಾರ, ಎಂ.ಬಿ.ಆದಿಗೊಂಡ, ಸಂಗಮೇಶ ಓಲೇಕಾರ, ರವಿ ರಾಠೋಡ, ಸಂಜೀವ ಕಲ್ಯಾಣಿ, ಕಮಲಸಾಬ ಕೊರಬು, ಪುರಸಭೆ ಸದಸ್ಯೆ ಜಗದೇವಿ ಗುಂಡಳ್ಳಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಉಪಪ್ರಾಚಾರ್ಯ ರಮೇಶ ಪೂಜಾರಿ ಇತರರು ಇದ್ದರು. ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ಬಿ.ಹೂಗಾರ ಪ್ರತಿಜ್ಞಾ ವಿಧಿ ಬೋಧಿಸಿದರು.
ಚೈತ್ರಾ ಸಣ್ಣತಂಗಿ ಸಂಗಡಿಗರು ಪ್ರಾರ್ಥಿಸಿದರು. ರಾಜಶೇಖರ ಐನಾಪೂರ ಸ್ವಾಗತಿಸಿದರು. ಎಸ್.ವ್ಹಿ.ಅಗಸರ ನಿರೂಪಿಸಿದರು. ಜಿ.ಎಸ್.ಡೋಮನಾಳ ವಂದಿಸಿದರು.

