ರಾಯಚೂರಿನಲ್ಲಿ ನಡೆದ ಕಲಬುರಗಿ ವಲಯ ಮಟ್ಟದ ಮಹಿಳಾ ಚೆಸ್ ಪಂದ್ಯಾವಳಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಕಾಲೇಜಿನ ಮಹಿಳಾ ತಂಡ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಯೋಜಿಸಿದ್ದ ಕಲಬುರಗಿ ವಲಯ ಮಟ್ಟದ ಮಹಿಳಾ ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ.
ರಾಯಚೂರಿನ ನವೋದಯ ಡೆಂಟಲ್ ಕಾಲೇಜಿನಲ್ಲಿ ಆಗಷ್ಟ 1 ಮತ್ತು 2 ರಂದು ನಡೆದ ಈ ಪಂದ್ಯಾವಳಿಯಲ್ಲಿ ಬಿ.ಎಲ್.ಡಿ.ಇ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಾದ ದೀಪ್ತಿ ಮಂಗಲಗಿ, ಗೀತಾಂಜಲಿ ಮುದ್ನೂರ, ಸಾನಿಕಾ ದೇಶಪಾಂಡೆ, ಅನುರಾಧಾ ರೆಡ್ಡಿ ಮತ್ತು ಪೂಜಾ ಬಿರಾಜದಾರ ಅವರನ್ನೊಳಗೊಂಡ ತಂಡ ಪ್ರಥಮ ಸ್ಥಾನ ಪಡೆಯಿತು.
ಮಹಿಳಾ ಚೆಸ್ ತಂಡದ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಸಂಸ್ಥೆಯ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.
ಈ ಮಧ್ಯೆ ಮಂಗಳವಾರ ಕಾಲೇಜಿಗೆ ಆಗಮಿಸಿದ ಚೆಸ್ ತಂಡದ ಸದಸ್ಯರನ್ನು ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಉಪಪ್ರಾಚಾರ್ಯ ಶಶಿಧರ ನಾಯಕ, ಸಹಾಯಕ ಪ್ರಾಧ್ಯಾಪಕ ಅನೀಶ ಮದನಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಈರಪ್ಪ ಇಕ್ಕಳಕಿ ಸ್ವಾಗತಿಸಿ ಅಭಿನಂದಿಸಿದರು.

