ಮಕ್ಕಳ ಉಜ್ವಲ ಭವಿಷ್ಯ ಸಾಕಾರಕ್ಕೆ ಅಧಿಕಾರಿಗಳು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಡಿಸಿ ಡಾ.ಆನಂದ ಕೆ. ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯ ಜಿಲ್ಲೆಯಲ್ಲಿರುವ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಅವರ ಜೀವನ ಸುಂದರಗೊಳಿಸಿಕೊಳ್ಳಲು ಸರ್ಕಾರ ಒದಗಿಸಿರುವ ಸೌಲಭ್ಯಗಳು ಸಮರ್ಪಕವಾಗಿ ದೊರಕುತ್ತಿರುವ ಕುರಿತು ಅಧಿಕಾರಿಗಳು ಸ್ವಯಂಪ್ರೇರಿತವಾಗಿ ವಾರಕ್ಕೊಂದು ಸಲ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ.ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಇದು ಸ್ವಯಂ ಪ್ರೇರಿತ ಕಾರ್ಯವಾಗಿದೆ. ಸಾಮಾಜಿಕ ಜವಾಬ್ದಾರಿಯೊಂದಿಗೆ ಅಧಿಕಾರಿಗಳು ಮೇಲಿಂದ ಮೇಲೆ ಹಾಸ್ಟೇಲ್‌ಗಳಿಗೆ ಭೇಟಿ ನೀಡಬೇಕು. ಅಲ್ಲಿ ಕಲ್ಪಿಸಲಾಗಿರುವ ಮೂಲಭೂತ ಸೌಲಭ್ಯ, ಮಕ್ಕಳ ಜ್ಞಾನಾರ್ಜನೆ, ಕಲಿಕಾ ಸಂದರ್ಭದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳು ವಿಷಯಗಳ ಮನನ ಮುಂತಾದ ವಿಷಯಗಳ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಾರದಲ್ಲಿ ಒಂದು ಬಾರಿ ಒಂದು ವಸತಿ ನಿಲಯ ಹಾಗೂ ವಸತಿ ಶಾಲೆಗೆ ಭೇಟಿ ನೀಡಿ, ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಯಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿ ಜೀವನದ ಸುಂದರ ಜೀವನ ಭವಿಷ್ಯದ ಗುರಿ ಸಾಕಾರಗೊಳ್ಳುವ ನಿಟ್ಟಿನಲ್ಲಿ ಅವರೊಂದಿಗೆ ಬೆರೆತು ಅವರ ಕಷ್ಟ ಕಾರ್ಪಣ್ಯಗಳನ್ನು ತಿಳಿದುಕೊಂಡು ಸಾಧ್ಯವಾದಷ್ಟು ಪರಿಹರಿಸುವ ನಿಟ್ಟಿನಲ್ಲಿ ತಾವುಗಳು ಸ್ವಯಂ ಪ್ರೇರಿತರಾಗಿ ಈ ಜವಾಬ್ದಾರಿಯನ್ನು ಮಕ್ಕಳ ಹಿತದೃಷ್ಟಿಯಿಂದ ವಹಿಸಿಕೊಂಡು ನಿರ್ವಹಿಸುವಂತೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೆಣ್ಣೂರ,ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮಣ್ಣಗೌಡ ಹಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

