ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯ ಅಂಗವಾಗಿ ಮಹಿಳೆಯರು ವಿವಿಧ ದೇವಾಲಯಗಳಲ್ಲಿನ ನಾಗರ ಪ್ರತಿಮೆಗೆ ಭಕ್ತಿಯಿಂದ ಹಾಲೇರೆದು ಪೂಜಿಸಿದರು.
ಪಟ್ಟಣದಲ್ಲಿ ಮಂಗಳವಾರದಂದು ದೇವಸ್ಥಾನದ ಆವರಣ, ಮಠ ಸೇರಿದಂತೆ ವಿವಿಧೆಡೆ ಇರುವ ನಾಗ ಪ್ರತಿಷ್ಠಾಪನೆಯ ಸ್ಥಳಗಳಿಗೆ ಹೂ,ಹಾರ, ಹಾಲು, ನೈವಿಧ್ಯಗಳೊಂದಿಗೆ ತೆರಳಿ “ ದೇವರ ಪಾಲು, ಗುರುವಿನ ಪಾಲು, ಹಿರಿಯರ ಪಾಲು, ಸರ್ವರ ಪಾಲು ಎಂದು ಹೇಳುತ್ತಾ ಮಕ್ಕಳೊಂದಿಗೆ ನಾಗರ ಪ್ರತಿಮೆಗೆ ಹಾಲು ಎರೆದು ಪೂಜೆ ಸಲ್ಲಿಸಿದರು.
ನಾಗರಪಂಚಮಿಯ ಮೊದಲ ದಿನವಾದ ಸೋಮವಾರ ಮಹಿಳೆಯರು, ಮಕ್ಕಳು ಹೊಸ ಬಟ್ಟೆ ಧರಿಸಿ ಮನೆಮನೆಗಳಲ್ಲಿ ಹಾಲು ಎರೆದು ಒಂದುಹೊತ್ತಿನ ಉಪವಾಸ ವೃತ ಮಾಡುವುದರ ಮೂಲಕ ಹಬ್ಬದ ಆಚರಣೆ ಆರಂಭಿಸಿದರು. ಸಾಯಂಕಾಲ ಮಹಿಳೆಯರು ತಮ್ಮ ಮನೆಯಲ್ಲಿ ತಯಾರಿಸಿದ ಹಲವು ಬಗೆಯ ಲಾಡು, ಕರ್ಜಿಕಾಯಿ, ಅವಲಕ್ಕಿಚೂಡ, ಚಕ್ಕುಲಿ ಸಹಿತ ವಿವಿಧ ತಿಂಡಿಗಳನ್ನು ಆಪ್ತರು, ಸಂಬಂಧಿಗಳ ಮನೆಮನೆಗೆ ತೆರಳಿ ನೀಡುವ ಮೂಲಕ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯ ತೋರಿದರು.
ಇಂದು ಎರಡನೆಯ ದಿನ ಹೊರಗಿನ ನಾಗರ ಪ್ರತಿಮೆಗಳಿಗೆ ಹಾಲು ಎರೆಯುವ ಸಂಪ್ರದಾಯವನ್ನು ಪಾಲಿಸಲಾಯಿತು. ಆದರೆ ಪಂಚಮಿಯ ವಿಶೇಷವಾದ ಜೋಕಾಲಿ ಮಾತ್ರ ವಿರಳವಾಗಿದ್ದು ಕೆಲವೇ ಸ್ಥಳಗಳಲ್ಲಿ ಕಂಡು ಬಂದವು. ಹಿಂದೆ ಓಣಿ-ಓಣಿಗಳಲ್ಲಿ ಕಂಡು ಬರುತ್ತಿದ್ದ ಅಂತರಜೋಕಾಲಿಗಳು ಇಂದು ಬಹುತೇಕ ಕಣ್ಮರೆಯಾಗಿದ್ದು, ಕೆಲವೇ ಓಣಿಗಳಲ್ಲಿ ಇರುವ ಮರಗಳಿಗೆ ಕಟ್ಟಿದ ಜೋಕಾಲಿಗಳ ಮೂಲಕ ಮಹಿಳೆಯರಿಗೆ ಆಡಲು ಅವಕಾಶ ಕಲ್ಪಿಸಲಾಗಿತ್ತು. ಚಿಕ್ಕ ಮಕ್ಕಳು ಮಾತ್ರ ಹೊಸ ಬಟ್ಟೆ ಧರಿಸಿ ಜೋಕಾಲಿಯ ಸವಿ ಸವಿದರು.

