ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ತಾಲೂಕಿನ ಮಳ್ಳಿ-ನಾಗರಳ್ಳಿ ಉಗಾರ ಶುಗರ್ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಿಂದ ಪ್ರತಿ ಟನ್ ಕಬ್ಬಿನ ಬೆಳೆಗೆ ₹3,600 ದರ ನೀಡಲು ಒಪ್ಪಿಗೆ ನೀಡಿದೆ.
ಕಳೆದ ನಾಲ್ಕು ದಿನಗಳಿಂದ ಬೆಳಗಾವಿ ಕಾರ್ಖಾನೆಗಳು ನೀಡುವ ದರದಂತೆ ಉಗಾರ ಶುಗರ್ಸ್ ಕಾರ್ಖಾನೆಯು ₹3600 ದರ ನೀಡಬೇಕೆಂದು ಆಗ್ರಹಿಸಿ ರೈತರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಹೋರಾಟಕ್ಕೆ ಕೊನೆಗೂ ಜಯ ದೊರೆತಿದೆ.
ಕಲಬುರಗಿ ಜಿಲ್ಲಾಧಿಕಾರಿಗಳು ರೈತರ ತೀವ್ರ ಸ್ವರೂಪದ ಹೋರಾಟ ಮನಗಂಡು ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ನಡೆಸಿ ₹3600 ದರ ಕೊಡಿಸುವ ಕ್ರಮಕ್ಕೆ ಮುಂದಾಗಿದ್ದು ರೈತರ ಹೋರಾಟಕ್ಕೆ ಈ ಸದ್ಯ ವಿರಾಮ ಹೇಳುವಂತಾಗಿದೆ.
ರೈತರ ಸತತ ಹೋರಾಟ, ಒಗ್ಗಟ್ಟು ಹಾಗೂ ಹೋರಾಟಗಾರರ ನಿರಂತರ ಪ್ರಯತ್ನದ ಫಲವಾಗಿ ಕಬ್ಬಿಗೆ ಪ್ರತಿ ಟನ್ಗೆ ₹3,600 ದರ ನಿಗದಿಯಾಗಿರುವುದು ಕಬ್ಬು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.
ಇದೇ ಸಂದರ್ಭದಲ್ಲಿ ರೈತರ ನ್ಯಾಯಯುತ ಬೇಡಿಕೆ ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಹೋರಾಟಗಾರರಿಗೆ ಕಬ್ಬು ಬೆಳೆಗಾರ ರೈತರು ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಿದರು.
ಹಲವು ದಿನಗಳಿಂದ ಹಗಲು-ರಾತ್ರಿ ಎನ್ನದೆ ಧರಣಿ ನಡೆಸಿದ ಸಾಹೇಬ ಗೌಡ ದೇಸಾಯಿ, ಸಾಂಬಶಿವ ಹಿರೇಮಠ, ಕೇಶುರಾಯಗೌಡ ಮಾಲಿಪಾಟೀಲ ಕಾಚಾಪುರ ಸೇರಿದಂತೆ ರೈತ ಮುಖಂಡರು ಹಾಗೂ ತಾಲೂಕಿನ ರೈತರ ಪರಿಶ್ರಮಕ್ಕೆ ಫಲ ಸಿಕ್ಕಿದ್ದು, ರೈತರ ಒಗ್ಗಟ್ಟು ಮತ್ತು ಸಂಘಟಿತ ಹೋರಾಟದಿಂದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂಬುದಕ್ಕೆ ಈ ಹೋರಾಟ ಸಾಕ್ಷಿಯಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲ ರೈತರು ಹಾಗೂ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸಲಾಯಿತು.

