ಕಟಾವಿಗೆ ಬಂದ ಕಬ್ಬು & ಟ್ರ್ಯಾಕ್ಟರ್ ಬೆಂಕಿಗಾಹುತಿ | ಅಗ್ನಿಶಾಮಕ ವಾಹನ ತಲುಪಲು ವಿಳಂಬ | ರೈತರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿದ್ಯುತ್ ತಂತಿ ಸ್ಪರ್ಶದಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು ಹತ್ತು ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಕಟಾವಿಗೆ ಬಂದ ಕಬ್ಬು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ದಸೂರ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ಗ್ರಾಮದ ರೈತರಾದ ಮಹೇಶ ರೇವಪ್ಪ ಅಂಕಲಗಿ, ಸತೀಶ ನಾರಾಯಣ ಸಿತೋಳೆ ಹಾಗೂ ಮನೋಜಕುಮಾರ ಸಿತೋಳೆ ಅವರಿಗೆ ಸೇರಿದ ಜಮೀನಿನ ಕಬ್ಬಿನ ಗದ್ದೆಯಲ್ಲಿ ವಿದ್ಯುತ್ ಸ್ಪರ್ಶದಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕಬ್ಬಿನ ಗದ್ದೆಗೆ ವ್ಯಾಪಿಸಿದ್ದು, ಹತ್ತು ಎಕರೆಗೂ ಅಧಿಕ ಪ್ರದೇಶದ ಕಬ್ಬು ಸುಟ್ಟು ಕರಕಲಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟ ಸಂಭವಿಸಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಕಬ್ಬಿನ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಬೆಂಕಿ ನಂದಿಸುವ ಕಾರ್ಯದಲ್ಲಿ ಬಳಸಿದ ಟ್ರ್ಯಾಕ್ಟರ್ ಕೂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಹಾನಿಗೀಡಾಗಿದೆ.
ಘಟನೆಗೆ ಸಂಬಂಧಿಸಿದಂತೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಬೆಳೆ ಹಾಗೂ ಟ್ರ್ಯಾಕ್ಟರ್ ನಷ್ಟದ ಅಂದಾಜು ಮಾಡಬೇಕು. ಸಂತ್ರಸ್ತ ರೈತರಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಹಾಗೂ ಹೋರಾಟಗಾರರು ಆಗ್ರಹಿಸಿದ್ದಾರೆ.
ಬಾಕ್ಸ್
ಅಗ್ನಿಶಾಮಕ ವಾಹನ ಬರಲು ವಿಳಂಬ: ರೈತರ ಆಕ್ರೋಶ
ದಸೂರ ಗ್ರಾಮದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಇಂಡಿಯಿಂದ ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಲು ಸುಮಾರು ಒಂದು ಗಂಟೆ ತೆಗೆದುಕೊಂಡಿದೆ. ಅಷ್ಟರೊಳಗೆ ಬೆಂಕಿ ವ್ಯಾಪಕವಾಗಿ ಹರಡಿ ಕಟಾವಿಗೆ ಬಂದಿದ್ದ ಕಬ್ಬು ಸಂಪೂರ್ಣ ಸುಟ್ಟುಹೋಗಿದೆ. ಅಗ್ನಿಶಾಮಕ ವಾಹನ ಸಮಯಕ್ಕೆ ಸರಿಯಾಗಿ ತಲುಪಿದ್ದರೆ ಬೆಳೆ ನಷ್ಟವನ್ನು ಸ್ವಲ್ಪಮಟ್ಟಿಗಾದರೂ ತಡೆಗಟ್ಟಬಹುದಿತ್ತು. ಆದರೆ ವಾಹನ ಬರುವಷ್ಟರಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕೃಷಿ ವೆಚ್ಚ ಹೆಚ್ಚಳ ಹಾಗೂ ಕಬ್ಬಿನ ದರದ ಅನಿಶ್ಚಿತತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಈ ಘಟನೆ ಮತ್ತಷ್ಟು ಆರ್ಥಿಕ ಹೊಡೆತ ನೀಡಿದೆ. ಗ್ರಾಮೀಣ ಭಾಗಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದಾಗ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಚಡಚಣ ಭಾಗದಲ್ಲಿಯೇ ಅಗ್ನಿಶಾಮಕ ವಾಹನದ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

