ಜೈನಾಪುರದಲ್ಲಿ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ದೇವಾಲಯ ಉದ್ಘಾಟನೆ & ಮೂರ್ತಿ ಪ್ರತಿಷ್ಠಾಪನಾ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಾಲುಮತ ಸಮಾಜ ಸ್ವಚ್ಛ ಸಮುದಾಯ. ಅವರ ಭಂಡಾರದಲ್ಲಿ ಶಕ್ತಿ ಹಾಗೂ ಭಕ್ತಿ ಇದೆ ಎಂದು ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ ಅವರು ಹೇಳಿದರು.
ಬಬಲೇಶ್ವರ ತಾಲೂಕಿನ ಹೊಳೆ ಜೈನಾಪುರ ಗ್ರಾಮದಲ್ಲಿ ರವಿವಾರ ನಡೆದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ದೇವಾಲಯ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೈನಾಪುರ ಐತಿಹಾಸಿಕ ಹಿನ್ನೆಲೆಯ ಊರವಾಗಿದೆ. ಇಲ್ಲಿನ ಕಾಶಿಬಾಯಿ ದೇಸಾಯಿಯವರ ಸ್ವಾತಂತ್ರ್ಯದ ಸ್ವಾಭಿಮಾನಿ ನೆಲ ಇದು ಎಂದರು.
ಈಗಾಗಲೇ ಈ ಬೀರಲಿಂಗೇಶ್ವರ ದೇವಾಲಯಕ್ಕೆ 15 ಲಕ್ಷ ರೂ. ಅನುದಾನ ನೀಡಲಾಗಿದೆ. ಇಲ್ಲಿನ ರಸ್ತೆಗಳನ್ನು ಬೇಗ ಸುಧಾರಿಸಲಾಗುವುದು. ಹಾಲುಮತ ಸಮಾಜ ಸಿದ್ದರಾಮ್ಮಯ್ಯನವರಂತಹ ಮೇರು ವ್ಯಕ್ತಿತ್ವದ ನಾಯಕನ್ನು ನೀಡಿದೆ. ಬೀರಲಿಂಗೇಶ್ವರ ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಆಳಂದ ತಾಲೂಕಿನ ಮಾದನ ಹಿಪ್ಪರಗಾದ ಅಭಿನವ ಶಿವಲಿಂಗ ಶಿವಯೋಗಿ ಸ್ವಾಮೀಜಿ ಮಾತನಾಡಿ, ಗಂಗೆಯನ್ನು ಪರಿವಾರವಾರದ ಶಾಪ ವಿಮೋಚನೆಗೆ ತಪಸ್ಸು ಮಾಡಿ ತಂದಿದ್ದು ಭಗೀರಥರ ಮಹಿಮೆ. ಆದರೆ ಸಚಿವ ಪಾಟೀಲರು ಸಿಕ್ಕ ಅವಕಾಶದಿಂದ ಇಡೀ ವಿಜಯಪುರ ಜಿಲ್ಲೆಗೆ ನೀರು ಹರಿಸಿ ಜನಗಳಿಗಾಗಿ ಆಧುನಿಕ ಭಗೀರಥ ಎನ್ನಿಸಿಕೊಂಡವರು. ಈ ಮಾತನ್ನು ಮಾಜಿ ಸಚಿವರಾದ ಬಿ.ಆರ್.ಪಾಟೀಲ ಅವರು ಹೇಳುತ್ತಿದ್ದರು ಎಂದರು.
ಒಳ್ಳೆಯದಕ್ಕಾಗಿ ನಾವು ಬದುಕಬೇಕು. ಒಳ್ಳೆಯ ವಿಚಾರಕ್ಕಾಗಿ ನಮ್ಮ ತಲೆ ಬಳಸಿಕೊಳ್ಳಬೇಕು. ಬೇರೆಯವರ ಚಿಂತೆಯಿಂದ ಮನುಷ್ಯನ ಮನಸ್ಸು ಹಾಳಾಗುತ್ತದೆ. ಬಸವಾದಿ ಶರಣರು ಇದನ್ನೇ ಹೇಳಿದ್ದಾರೆ. ನಾವು ತನು, ಮನದಿಂದ ಶುದ್ಧವಾದರೆ ನೀವೇ ಬೀರಲಿಂಗ ಆಗುತ್ತೀರಿ. ಮನುಷ್ಯರು ಬುದ್ಧಿವಂತ, ತಾಳ್ಮೆ ಸಂಪಾದಿಸಿದರೆ ಜನಾನುರಾಗಿಯಾಗಲು ಸಾಧ್ಯ. ನಯ, ವಿನಯದ ಜೀವನ ನಮ್ಮದಾಗಬೇಕು. ಮನಸ್ಸನ್ನು ಮಡಿಯಾಗಿ ಇಟ್ಟುಕೊಳ್ಳಬೇಕು. ಎಲ್ಲರೂ ನಮ್ಮವರೆನ್ನುವ ಭಾವ ಮೂಡಿದರೆ ಎಲ್ಲರ ಬದುಕು ಸುಂದರವಾಗಲು ಸಾಧ್ಯ ಎಂದು ಸೇರಿದ್ದ ಭಕ್ತಿರಿಗೆ ತಿಳಿ ಹೇಳಿದರು.
ಹಾಲುಮತ ಗುರು ಪೀಠದ ಸಿದ್ದಯ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕರಾದ ಉಮೇಶ ಮೇಟಿ, ಕುಮಾರ ದೇಸಾಯಿ, ಬಸವರಾಜ ದೇಸಾಯಿ, ದೇವಸ್ಥಾನ ಸಮಿತಿಯ ಹಣಮಂತ ಗಡಿಬಿಡಿ, ಭೀಮಶಿ ನಾಗರಾಳ, ಬಸಪ್ಪ ಕೊಡೇಕಲ್, ರಾಜು ಕಂಬಾಗಿ, ಮಲ್ಲು ಪರ್ಸಣ್ಣವರ, ರಾಜು ಕಂನವಾಡಿ, ಎಲ್.ಎಚ್.ದೊಡ್ಡಿ, ವೈ.ವೈ.ತಿಮ್ಮಾಪುರ ಹಾಗೂ ರಾಮಸ್ವಾಮಿ ಶಿರೂರ ಅನೇಕರು ಉಪಸ್ಥಿತರಿದ್ದರು.

