ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ ಈ ನಾಗರ ಪಂಚಮಿ ಹಬ್ಬವಾಗಿದೆ. ಈ ದಿನದಂದು ಕುಟುಂಬ ಸದಸ್ಯರೆಲ್ಲರೂ ಅದರಲ್ಲೂ ಮಹಿಳೆಯರು ಹಾಗೂ ಮಕ್ಕಳು ಹೊಸ ಬಟ್ಟೆ ಧರಿಸಿ ಈ ಹಬ್ಬ ಆಚರಣೆಗೆ ಸಿದ್ದರಾಗಿದ್ದರು.
ಪಟ್ಟಣ ಸೇರಿದಂತೆ ಪ್ರತಿ ಗ್ರಾಮಗಳಲ್ಲಿ ಮಹಿಳೆಯರು ಕುಟುಂಬ ಸದಸ್ಯರ ಹಾಗೂ ಸಹೋದರರ ಆರೋಗ್ಯ ಹಾಗೂ ಯಶಸ್ಸಿಗಾಗಿ ನಾಗದೇವತೆಯನ್ನು ಪೂಜಿಸಿ ಪ್ರಾರ್ಥಿಸಿದರು. ಕಲ್ಲಿನಿಂದ ಕೆತ್ತಿದ ನಾಗದೇವತೆಗೆ ಕಡುಬು ನೈವಿಧ್ಯ ಅರ್ಪಿಸಿ ಕೊಬ್ಬರಿಯಲ್ಲಿ ಹಾಲು ಹಾಗೂ ತುಪ್ಪವನ್ನಿಟ್ಟು ನಾಗದೇವತೆಗೆ ಅರ್ಪಿಸಿದರು.
ಪ್ರತಿ ಮನೆಗಳಲ್ಲೂ ಸುತ್ತಮುತ್ತಲಿನ ಕುಟುಂಬ ಸದಸ್ಯರನ್ನು ಕರೆಯಿಸಿ ಹಿಟ್ಟಿನಿಂದ ಮಾಡಿದ ನಾಗದೇವತೆಗೆ ಹಾಲೆರೆದು ಪೂಜಿಸಿದರು. ಹಬ್ಬಕ್ಕಾಗಿ ಮಾಡಿದ ವಿವಿಧ ಖಾಧ್ಯಗಳನ್ನು ಸುತ್ತ ಮುತ್ತಲಿನ ಕುಟುಂಬಸ್ಥರಿಗೆ ನೀಡಿದರು.
ಪ್ರತಿ ಹಳ್ಳಿಗಳಲ್ಲಿ ವಿವಿಧ ಸ್ಪರ್ಧೆಗಳ ಏರ್ಪಡಿಸಿ ಯುವಕರು ಮನರಂಜಿಸಿದರು. ಜೋಕಾಲಿ ಆಡುವ ಮೂಲಕ ಮಹಿಳೆಯರು ಸಂತಸದಿಂದ ಹಬ್ಬ ಆಚರಿಸಿದರು.

