ನೂತನ ಅಧ್ಯಕ್ಷ ವೆಂಕಟೇಶ್ ವಿಶ್ವಾಸ, ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ವಾಗ್ದಾಳಿ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: 2028 ವಿಧಾನಸಭೆ ಚುನಾವಣೆಯಲ್ಲಿ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಅಭ್ಯರ್ಥಿ ಕಣಕ್ಕಿಳಿಯೋದು ಪಕ್ಕಾ, ಶಾಸಕರಾಗೋದು ಅಷ್ಟೇ ಸತ್ಯ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಾಲೂಕು ಬಿಜೆಪಿ ಮಂಡಲದ ನೂತನ ಅಧ್ಯಕ್ಷ ವೆಂಕಟೇಶ್ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷ ನನಗೆ ಜವಾಬ್ದಾರಿ ಕೊಟ್ಟಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ತಳಮಟ್ಟದಿಂದ ಪಕ್ಷ ಸಂಘಟಿಸಲು ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಕಾರ್ಯಕರ್ತರ ಕುಂದು ಕೊರತೆ ಆಲಿಸಿ, ಅವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಮುಂಬರುವ ವಿಧಾನಸಭೆ ಚುನಾವಣೆಯ ಗೆಲುವಿನ ಮೆಟ್ಟಿಲು ಆಗಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 50 ಸಾವಿರ ಮತ ಪಡೆದು ಎರಡನೇ ಸ್ಥಾನಕ್ಕೆ ಬಂದಿತ್ತು. ಹೀಗಾಗಿ 2028 ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸೋದು ಪಕ್ಕಾ. ಇದರಲ್ಲಿ ಅನುಮಾನವೇ ಬೇಡ.
ಶಾಸಕ ಅನಿಲ್ ಚಿಕ್ಕಮಾದು 8 ವರ್ಷಗಳ ಸಾಧನೆ ಶೂನ್ಯ. ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದರೋ ಹೊರತು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ತಾಲೂಕು ಕಚೇರಿ ಸೇರಿದಂತೆ ಎಲ್ಲ ಕಡೆ ಲಂಚಾವತಾರ ತಾಂಡವಾಡುತ್ತಿದ್ದು, ರೈತರ ಸ್ಥಿತಿ ಹೇಳತೀರದಾಗಿದೆ. ರಾಜ್ಯ ಸರ್ಕಾರ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಅವರ ಕಾರ್ಯವೈಖರಿ ವೈಫಲ್ಯ ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇವೆ. ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ. ತಂದೆ ಸಾವಿನ ಅನುಕಂಪದಿಂದ ಗೆದ್ದಿರುವ ಶಾಸಕರ ಬಂಡವಾಳ ಬಯಲು ಮಾಡುತ್ತೇನೆ ಎಂದು ವೆಂಕಟೇಶ್ ಗುಡುಗಿದರು.
ಈ ವೇಳೆ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರಾಜು ಬಿಡಗಲು, ಗುರುಸ್ವಾಮಿ, ಮೊತ್ತ ಬಸವರಾಜಪ್ಪ, ತಾಲೂಕು ಬಿಜೆಪಿ ವಕ್ತಾರ ಸೋಮೇಶ್ ಭೀಮನಹಳ್ಳಿ, ಸೋಮಾಚಾರ್, ಚಂದ್ರಮೌಳೇಶ್ವರ, ರವೀಂದ್ರ ಮಲಾರ, ಜವರಯ್ಯ ಮತ್ತು ಮಂಜುನಾಥ್ ಇದ್ದರು.
“ಕ್ಷೇತ್ರದ ಸಾಮಾನ್ಯ ಜನರಿಗೆ ಶಾಸಕ ಅನಿಲ್ ಚಿಕ್ಕಮಾದು ಸಿಗುತ್ತಿಲ್ಲ. ಅವರನ್ನು ಭೇಟಿ ಮಾಡಲು ವಾಹನ ಮಾಡಿಕೊಂಡು ಮೈಸೂರಿಗೆ ಹೋಗಬೇಕಾಗಿದೆ. ಕೆಲಸ ಕಾರ್ಯಬಿಟ್ಟು ಅವರ ಭೇಟಿಗೆ ಕ್ಯೂನಲ್ಲಿ ನಿಲ್ಲಬೇಕಾಗಿದೆ. ಇದನ್ನು ನೋಡಿದರೆ ಇವರು ಹೆಚ್ ಡಿ ಕೋಟೆ ಕ್ಷೇತ್ರ ಶಾಸಕರಾ ಅಥವಾ ಮೈಸೂರು ಶಾಸಕರಾ ಎಂಬ ಗೊಂದಲ ಜನರಲ್ಲಿ ಶುರುವಾಗಿದೆ.”
– ಸೋಮೇಶ್ ಭೀಮನಹಳ್ಳಿ
ತಾಲೂಕು ಬಿಜೆಪಿ ವಕ್ತಾರರು

