ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ತೆಲಗಿ, ರೋಣಿಹಾಳ ಮತ್ತು ಮುಳವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಲಗಿ LT, ಚಿರಲದಿನ್ನಿ, ರೋಣಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೋಣಿಹಾಳ, ಕುಪಕಡ್ಡಿ ಗ್ರಾಮಕ್ಕೆ ಹಾಗೂ ಮುಳವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಳವಾಡ ಸ್ಟೇಶನ್, ಮುಳವಾಡ ಗ್ರಾಮಕ್ಕೆ ವಿಜಯಪುರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಭೇಟಿ ನೀಡಿ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಸೋಮವಾರ ಪರಿಶೀಲನೆ ಮಾಡಿದರು.
ಜಲ ಮಿಷನ್ ಜೀವನ ಯೋಜನೆ ಅಡಿಯಲ್ಲಿ ಕೈಗೊಂಡ ಪ್ರತಿ ಗ್ರಾಮಗಳಿಗೆ ಪ್ರತಿ ಮನೆ – ಮನೆಗಳಿಗೆ ನಳಗಳ ಸಂಪರ್ಕ ಮೂಲಕ ಪ್ರತಿದಿನ ನೀರು ಪೂರೈಕೆ ಆಗುತ್ತಿರುವ ಕುರಿತು ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಭೇಟಿ ವೇಳೆಯಲ್ಲಿ ಗ್ರಾಮಗಳಲ್ಲಿ ಅನುಷ್ಠಾನಗೊಂಡಿರುವ ಜಲಜೀವನ ಮಿಷನ್ ಯೋಜನೆಯಡಿ ನಮ್ಮ ಜಿಲ್ಲೆಯಲ್ಲಿ ಉತ್ತಮ ಕಾಮಗಾರಿಗಳು ಪೂರ್ಣಗೊಂಡಿದ್ದರಿಂದ ನಿಮ್ಮ ಮನೆ-ಮನೆಗೆ ಬಂದ ಗಂಗೆಯನ್ನು ಗ್ರಾಮಸ್ಥರು ಮಿತವಾಗಿ ಬಳಸಿ, ಸ್ವಚ್ಛತೆ ಕಾಪಾಡುವುದರ ಮೂಲಕ ದಿನನಿತ್ಯ ಉಪಯೋಗಿಸಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು. ನೀರಿನ ಟ್ಯಾಂಕಗಳ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಕೊಡಿ, ಪ್ರಗತಿಯಲ್ಲಿರುವ ಕಾಮಗಾರಿಗಳು ತ್ವರಿತಗತಿಯಲ್ಲಿ ಮುಗಿಸಿ, ಜನರಿಗೆ ನಳ ಸಂಪರ್ಕ ಒದಗಿಸಿ ನೀರು ಕೊಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರು ಬಸವನ ಬಾಗೇವಾಡಿ ವಿ.ಬಿ. ಗೊಂಗಡಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ದಸ್ತಗಿರಸಾಬ್ ಬಿಳಿಕುದರೆ, ಸುಕನ್ಯಾ ಲಂಬು, ರಾಘವೇಂದ್ರ ಪಂಚಾಳ್ ಹಾಗೂ ಅಧಿಕಾರಿಗಳು ಸಿಬ್ಬಂದಿಗಳು ಗ್ರಾಮ ಪಂಚಾಯಿತ ಸದಸ್ಯರು ಅಧ್ಯಕ್ಷರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

