ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಒಬ್ಬ ಧೈರ್ಯಶಾಲಿಯಾದ ಪುಟ್ಟ ಹುಡುಗಿ ಇದ್ದಳು. ಸದಾ ತನ್ನ ಕೋಣೆಯ ಮಂಚದ ಮೇಲೆ ಮಲಗಿರುತ್ತಿದ್ದ ಆಕೆಗೆ ಅತ್ಯಂತ ಗಂಭೀರವಾದ ಕಾಯಿಲೆಯು ಆವರಿಸಿತ್ತು ಆಕೆಯ ಶಕ್ತಿಯೆಲ್ಲವೂ ಬಸಿದು ಹೋದಂತೆ ಆಗಿತ್ತು.. ಆದರೆ ಆಕೆಯ ಕನಸು ಕಾಣುವ ಶಕ್ತಿ ಮಾತ್ರ ಕುಂದಿರಲಿಲ್ಲ ಪ್ರತಿದಿನವೂ ಆಕೆ ತನ್ನ ಕೋಣೆಯ ಕಿಡಕಿಯಿಂದ ಹೊರಗೆ ಇರುವ ಮರವೊಂದನ್ನು ತದೇಕಚಿತ್ತದಿಂದ ನೋಡುತ್ತಾ ನಿಲ್ಲುತ್ತಿದ್ದಳು. ಗಿಡದಿಂದ ಒಂದೊಂದಾಗಿ ಎಲೆಗಳು ಉದುರುವುದು ಆಕೆಗೆ ಸೋಜಿಗದ ವಿಷಯವಾಗಿತ್ತು.
ಒಂದು ದಿನ ಮಧ್ಯಾಹ್ನದ ಸಮಯದಲ್ಲಿ ಅತ್ಯಂತ ಸೋತ ದನಿಯಲ್ಲಿ ಆಕೆ ತನ್ನ ಅಕ್ಕನಿಗೆ ಹೀಗೆ ಹೇಳಿದಳು
ಆ ಗಿಡದಲ್ಲಿ ಇನ್ನು ಎಷ್ಟು ಎಲೆಗಳು ಉದುರುವುದು ಬಾಕಿ ಉಳಿದಿವೆ?
ಅತಿಯಾದ ನೋವಿನಿಂದ ಆಕೆಯ ಸಹೋದರಿ ಆಕೆಯ ಬಳಿ ಬಂದು ಆಕೆಯ ಹಣೆಯನ್ನು ನೇವರಿಸುತ್ತಾ ಯಾಕೆ ಹೀಗೆ ಕೇಳುತ್ತಿರುವೆ ಎಂದು ಪ್ರೀತಿಯಿಂದ ಕೇಳಿದಳು.
ಯಾಕೆಂದರೆ ಆ ಗಿಡದ ಕೊನೆಯ ಎಲೆ ಉದುರಿದ ದಿನವೇ ನನ್ನ ಕೊನೆಯ ದಿನ ಆಗಬಹುದು ಎಂದು ನನಗೆ ಅನ್ನಿಸುತ್ತಿದೆ ಎಂದು ಆ ಬಾಲಕಿ ಹೇಳಿದಾಗ ತನ್ನ ಕಣ್ಣಲ್ಲಿರುವ ಹನಿಗಳು ಕೆಳಗೆ ಉದುರದಂತೆ ಆಕೆಯ ಅಕ್ಕ ನಸುನಗುತ್ತಾ ಹಾಗಾದರೆ ಪ್ರತಿದಿನವನ್ನು ನಾವು ದೇವರ ಕೊಡುಗೆ ಎಂಬಂತೆ ಜೀವಿಸೋಣ, ಹಾಗೆ ಜೀವಿಸುವುದು ಅತ್ಯಂತ ಸುಂದರವಾದ ಭಾವವನ್ನು ಮೂಡಿಸುತ್ತದೆ ಎಂದು ಹೇಳಿದಳು.
ಋತುಗಳು ನಿಧಾನವಾಗಿ ಸರಿದು ಒಂದೊಂದಾಗಿ ಎಲೆಗಳು ಕೂಡ ಉದುರತೊಡಗಿದವು.. ಆದರೆ ಅಲ್ಲೊಂದು ಎಲೆ ಮಾತ್ರ ಕೊಂಬೆಯೊಂದರ ಮರೆಯಲ್ಲಿ ಗಟ್ಟಿಯಾಗಿ ಅವುಚಿ ಹಿಡಿದುಕೊಂಡಿತ್ತು.
ಹೀಗೆಯೇ ಶರದೃತು ಕಳೆದು ಹೋಗಿ ವಸಂತ ಮಾಸ ಬಂದಿತು.. ಬೇಸಿಗೆಯ ಎಳೆ ಬಿಸಿಲು ಚಿಗುರುತ್ತಿದ್ದಂತೆ ಆಕೆಯ ಆರೋಗ್ಯವೂ ಕೂಡ ಸುಧಾರಿಸತೊಡಗಿತು. ಆಕೆಯಲ್ಲಿ ಹಸಿವೆ ಹೆಚ್ಚಿತ್ತು ಮತ್ತು ಚೈತನ್ಯವು ಒಡಮೂಡತೊಡಗಿತು. ಚೆನ್ನಾಗಿ ತಿನ್ನಲು ಆರಂಭಿಸಿದ ಆಕೆ ನಗುನಗುತ್ತಾ ಇರಲು ಆರಂಭಿಸಿದಳು. ಮತ್ತೆ ಆಕೆಯ ಬದುಕಿನಲ್ಲಿ ಭರವಸೆ ಮೂಡಿತು.

ಒಂದು ದಿನ ಆಕೆ ತನ್ನ ಮಂಚದ ಮೇಲಿಂದ ಎದ್ದು ನಿಧಾನವಾಗಿ ನಡುಗುವ ಕಾಲ್ಗಳನ್ನು ದೃಢ ನಿರ್ಧಾರದೊಂದಿಗೆ ಮುಂದಕ್ಕೆ ಇಟ್ಟು ನಡೆಯಲಾರಂಭಿಸಿದಳು. ಆ ಗಿಡಕ್ಕೆ ಗಟ್ಟಿಯಾಗಿ ಅಂಟಿಕೊಂಡಿರುವ ಎಲೆಯನ್ನು ನೋಡುವ ಬಯಕೆ ಆಕೆಯಲ್ಲಿ ಉಂಟಾಗಿ ಎಲ್ಲ ಶಕ್ತಿಯನ್ನು ಒಗ್ಗೂಡಿಸಿಕೊಂಡು ಆಕೆ ಆ ಮರದತ್ತ ಬಂದಳು.
ಹಾಗೆ ಆಕೆ ಮರದತ್ತ ಬಂದಾಗ ಆಕೆಗೆ ಸೋಜಿಗದ ವಿಷಯವನ್ನು ಎದುರಾಯಿತು. ಮರಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದ ಎಲೆ ನಿಜವಾದ ಎಲೆಯಾಗಿರಲಿಲ್ಲ. ಬದಲಾಗಿ ಕೈಯಿಂದ ರಚಿಸಿ ಮರಕ್ಕೆ ಅಂಟಿಸಿದ ಪ್ಲಾಸ್ಟಿಕ್ ಎಲೆಯ ಚಿತ್ರವಾಗಿತ್ತು. ಹಾಗೆ ಆ ಎಲೆಯನ್ನು ಮರಕ್ಕೆ ಅಂಟಿಸಿದ್ದು ಆಕೆಯನ್ನು ಅತಿಯಾಗಿ ಪ್ರೀತಿಸುವ ಅಕ್ಕ ಎಂದು ಯಾರೂ ಹೇಳದೆಯೇ ಆಕೆಗೆ ಅರಿವಾಗಿತ್ತು. ಅದೊಂದು ರಾತ್ರಿಯ ನೀರವ ಮೌನದಲ್ಲಿ ಆಕೆ ಪುಟ್ಟ ಪ್ಲಾಸ್ಟಿಕ್ ಎಲೆ ಒಂದನ್ನು ಗಿಡಕ್ಕೆ ಗಟ್ಟಿಯಾಗಿ ಅಂಟಿಸಿದ್ದಳು.
ಅಕ್ಕನ ಒಂದು ಪುಟ್ಟ ಮೋಸದ ತಂತ್ರ ಬಹುದೊಡ್ಡ ಪ್ರೀತಿಯ ಕ್ರಿಯೆಯಾಗಿದ್ದು ನಿನ್ನಲ್ಲಿ ನಿನಗೆ ನಂಬಿಕೆ ಇರುವವರೆಗೂ ಬದುಕಿನಲ್ಲಿ ಯಾವುದಕ್ಕೂ ನೀನು ಹೆದರಬೇಕಾಗಿಲ್ಲ.. ನಿಜ ಹೇಳಬೇಕೆಂದರೆ ಈ ಜಗತ್ತಿನಲ್ಲಿ ಯಾವುದೂ ನಶಿಸಿ ಹೋಗುವುದಿಲ್ಲ ಎಂಬ ಮೌನ ಸಂವಾದವಾಗಿತ್ತು.
ನೋಡಿದಿರಾ ಸ್ನೇಹಿತರೆ! ನಮ್ಮ ಬದುಕಿನಲ್ಲಿ ನಾವು ಹತಾಶೆಯಲ್ಲಿ ಮುಳುಗಿದಾಗ ನೋವಿನ ಆಳವಾದ ಕೂಪದಲ್ಲಿ ಸಿಲುಕಿ ಒದ್ದಾಡುತ್ತಿರುವಾಗ ಭರವಸೆಯ ಒಂದು ಎಳೆ ಸಾಕು ಮತ್ತೆ ಬದುಕಿನೆಡೆ ಮುಖ ಮಾಡಲು. ಭರವಸೆಯನ್ನು ಕೇವಲ ಮಾತಿನಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ನಾವು ಮಾಡುವ ಪ್ರತಿಯೊಂದು ಕ್ರಿಯೆಯೂ ಭರವಸೆಯನ್ನು ಮೂಡಿಸುವಂತಿರಬೇಕು. ಭರವಸೆಯ ಎಳೆಗಳು ಅತ್ಯಂತ ಮೃದುವಾಗಿದ್ದು ನಮ್ಮ ಹೃದಯಗಳನ್ನು ಜೋಡಿಸುವಂತಿರಬೇಕು. ನೊಂದ ಹೃದಯಗಳು ತಮ್ಮ ಕಣ್ಣೀರನ್ನು ಒರೆಸಿ ಮತ್ತೆ ಬದುಕನ್ನು ಹೊಸ ಹುರುಪಿನಿಂದ ಕಟ್ಟಿಕೊಳ್ಳಲು ಸಹಾಯಕವಾಗಿರಬೇಕು.
ನೀವು ಭರವಸೆಯನ್ನು ಕಳೆದುಕೊಂಡಾಗ ಬೇರೊಬ್ಬರು ನಿಮಗೆ ಅದನ್ನು ನಿಮಗೋಸ್ಕರವೇ ಕಟ್ಟಿಕೊಡುವಂತಿರಬೇಕು.
ಅಂತಹ ಭರವಸೆಯನ್ನು ನಾವು ಎಲ್ಲರಿಗೂ ಕಟ್ಟಿ ಕೊಡೋಣ ಬೇರೆಯವರ ಬಾಳಿಗೆ ದಾರಿ ತೋರುವ ದಿಕ್ಸೂಚಿಯಾಗೋಣ ಎಂಬ ಆಶಯದೊಂದಿಗೆ..
