ವಿಜಯಪುರ: ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರ ಮನವಿಗೆ ಸ್ಪಂದಿಸಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು, ಶಾಲಾ ಕೊಠಡಿ ನಿರ್ಮಾಣಕ್ಕೆ ರೂ.೧೨.೫ ಲಕ್ಷ ಮಂಜೂರು ಮಾಡಿಸಿದ್ದಾರೆ.
ಫೆ.೩ ರಂದು ನಗರ ಶಾಸಕರು, ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯ ಕೌಜಲಗಿ ತಾಂಡಾ ಸರ್ಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ.೪೬ ಹಾಗೂ ತೊರವಿಯ ಶಾಂತಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಗಳು ದುಸ್ಥಿತಿಯಲ್ಲಿದ್ದು, ಕುಸಿಯುವ ಸಂಭವವಿದೆ. ಇದರಿಂದ ಮಕ್ಕಳಿಗೆ ಪಾಠ ಮಾಡಲು ಮತ್ತು ಅವರ ಜೀವಕ್ಕೆ ಹಾನಿಯಾಗಬಹುದು. ಅಲ್ಲದೇ, ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗಿರುವುದರಿಂದ, ಕೊಠಡಿಗಳ ಕೊರತೆ ಇರುತ್ತದೆ. ಆದ್ದರಿಂದ ಈ ಶಾಲೆಗಳ ಕೊಠಡಿ ನಿರ್ಮಾಣಕ್ಕೆ ತಮ್ಮ ಶಾಸಕರ ಅನುದಾನ ಮಂಜೂರು ಮಾಡುವಂತೆ ಕೋರಿದ್ದರು.
ಅದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿ, ಕೌಜಲಗಿ ತಾಂಡಾ ಸರ್ಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ.೪೬ ಶಾಲಾ ಕೊಠಡಿ ನಿರ್ಮಾಣಕ್ಕೆ ರೂ.೧೨.೫ ಲಕ್ಷ ಅನುದಾನ ಮಂಜೂರಿಸಿ, ಹಣ ಬಿಡುಗಡೆಗೊಳಿಸಿ ನಿರ್ಮಿತಿ ಕೇಂದ್ರದಿಂದ ಅನುಷ್ಠಾನಗೊಳಿಸಲು ಸೂಚಿಸಿದ್ದಾರೆ ಎಂದು ವಿಜಯಪುರ ನಗರ ಶಾಸಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
Related Posts
Add A Comment