ದೇವರಹಿಪ್ಪರಗಿ: ಧರ್ಮವು ಉಸಿರಾಗಲಿ, ಹಸಿರಾಗಲಿ, ಹೆಸರಾಗಿ ಬೆಳಗಲಿ ಎಂದು ಸ್ಥಳೀಯ ಜಡೇಮಠದ ಜಡೇಸಿದ್ಧೇಶ್ವರ ಶ್ರೀಗಳು ಹೇಳಿದರು.
ಪಟ್ಟಣದ ವೀರಭದ್ರೇಶ್ವರಸ್ವಾಮಿ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಜರುಗಿದ ಧರ್ಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪರಶಿವನ ಜಡೆಯಿಂದ ಅವತರಿಸಿದ ಶ್ರೀವೀರಭದ್ರಸ್ವಾಮಿ ದಕ್ಷಬ್ರಹ್ಮನ ಸಂಹಾರಮಾಡಿ, ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸಿದಾತ. ಅಂತೆಯೇ ಶಿವಶರಣೆ ಅಕ್ಕಮಹಾದೇವಿ ಸಹ ವೀರಭದ್ರನ ಅಂಗುಷ್ಠದಲ್ಲಿ ಗೋವಿಂದನಿದ್ದಾನೆಂದೂ ತಮ್ಮ ವಚನಗಳಲ್ಲಿ ಉಲ್ಲೇಖಿಸಿ ಅವನ ಮಹಿಮೆ ಸಾರಿದ್ದಾಳೆ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ವೀರಭದ್ರೇಶ್ವರರ ೧೧ನೇ ಕಾರ್ತಿಕೋತ್ಸವದ ರೂಪರೇಷೆಗಳ ಕುರಿತು ತಿಳಿಸುತ್ತಾ, ದಿ:೨೮ ನೇ ನವೆಂಬರ್ ರಂದು ಮಹಾಪುರಾಣ ಆರಂಭಗೊಳ್ಳುವುದು. ದಿ: ೧೮ ನೇ ಡಿಸೆಂಬರ್‌ದಂದು ಶ್ರೀಮದ್ ರಂಭಾಪುರಿ ಮಹಾಸನ್ನಿದಿ ಅವರ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧರ್ಮಸಭೆ ಜರುಗುವುದು. ದಿ:೧೯ನೇ ಡಿಸೆಂಬರ್‌ದಂದು ವೀರಭದ್ರಸ್ವಾಮಿಯ ಪಲ್ಲಕ್ಕಿ ಉತ್ಸವ ಜರುಗುವುದು. ಅದಕ್ಕಾಗಿ ಪಟ್ಟಣದ ಎಲ್ಲ ಪೂಜ್ಯರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸ್ಥಳಿಯ ಸದಯ್ಯನಮಠದ ವೀರಗಂಗಾಧರಶ್ರೀಗಳು, ಶಿವಯೋಗಿ ದೇವರು ಆಶೀರ್ವಚನದ ಮೂಲಕ ವೀರಭದ್ರಸ್ವಾಮಿ ಜಯಂತಿಯ ವಿಶೇಷತೆಗಳನ್ನು ತಿಳಿಸಿದರು.
ಪ್ರಭುದೇವ ಹಿರೇಮಠ, ಮಡಿವಾಳಪ್ಪ ಮಣೂರ, ನಾನಾಗೌಡ ಯಾಳಗಿ, ಬಂಡೆಪ್ಪ ಬಿರಾದಾರ, ಪಂಚಾಕ್ಷರಿ ಮಿಂಚನಾಳ, ಬಾಬುಗೌಡ ಪಾಟೀಲ, ಯಲಗೂರೇಶ ದೇವೂರ, ತೇಜಣ್ಣ ಕಕ್ಕಳಮೇಲಿ, ಸೋಮು ಹಿರೇಮಠ, ಆನಂದ ಜಡಿಮಠ, ವಿನೋದ ನಾಶಿಮಠ ಸೇರಿದಂತೆ ಸದ್ಭಕ್ತರು ಇದ್ದರು.
Related Posts
Add A Comment