ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ದಲಿತರ ಭೂಮಿ, ವಸತಿ ಹಕ್ಕು ಸಹಿತ ಇತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನಾ ಧರಣಿ ಕೈಗೊಂಡು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣಕ್ಕೆ ಶುಕ್ರವಾರ ಆಗಮಿಸಿದ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಭೂಮಿ ಮಂಜೂರಾತಿಗೆ ಆಗ್ರಹಿಸಿ ೨ ಗಂಟೆಗಳ ಕಾಲ ಪ್ರತಿಭಟನಾ ಧರಣಿ ಕೈಗೊಂಡರು.
ಈ ಸಂದರ್ಭದಲ್ಲಿ ತಾಲ್ಲೂಕು ಪ್ರಧಾನ ಸಂಚಾಲಕ ಸಾಯಬಣ್ಣ ದಳಪತಿ ಮಾತನಾಡಿ, ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಸರ್ಕಾರಗಳು ಕೈಗಾರಿಕೆಗಳ ಸ್ಥಾಪನೆಯ ನೆಪದಲ್ಲಿ ವಿದೇಶಿ ಬಂಡವಾಳಗಾರರಿಗಾಗಿ ಸ್ವಾಧೀನ ಪಡಿಸಿಕೊಳ್ಳುತ್ತಿವೆ. ಇದು ದಲಿತರನ್ನು ಭೂಮಿಯಿಂದ ಕೇವಲ ಹೊರದಬ್ಬುವ ಕುಂತಂತ್ರವಾಗಿದೆ.
ಪರಿಶಿಷ್ಟ ಜಾತಿ, ವರ್ಗ, ಭೂರಹಿತ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿ ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕು. ಹಾಗೂ ವಜಾಗೊಳಿಸಿರುವ ಸಾಗುವಳಿ ಅರ್ಜಿಗಳನ್ನು ಮರುಪರಿಶೀಲಿಸಬೇಕು. ಎಸ್‌ಸಿಎಸ್‌ಪಿ-ಟಿಎಸ್‌ಪಿ ನಿರ್ವಹಣೆಗೆ ಪ್ರತ್ಯೇಕ ನಿರ್ದೇಶನಾಲಯ ಅಥವಾ ಏಕಗವಾಕ್ಷಿ ಯೋಜನೆ ವ್ಯವಸ್ಥೆ ಜಾರಿಗೊಳಿಸಬೇಕು. ಸಮಾಜ ಕಲ್ಯಾಣ ಇಲಾಖೆಯಡಿಯ ವಿದ್ಯಾರ್ಥಿ ನಿಲಯಗಳನ್ನು ಉನ್ನತಿಕರಣಗೊಳಿಸಿ, ನಿಗದಿತ ಅವಧಿಯೊಳಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಎಂಬ ವಿವಿಧ ಎಂಟು ಹಕ್ಕೊತ್ತಾಯಗಳ ಕುರಿತು ಆಗ್ರಹಿಸಿದರು. ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಸಂಘಟನಾ ಸಂಚಾಲಕರಾದ ಸಂತೋಷ ಯಾಳವಾರ, ಅನೀಲ ತಳಕೇರಿ, ಪ್ರಭು ಬಮ್ಮನಜೋಗಿ, ಸದಾಶಿವ ಚಟ್ಟರಕಿ, ಸುದೀಪ ದೊಡಮನಿ, ಪ್ರದೀಪ ಕಟ್ಟಿಮನಿ, ಪ್ರಕಾಶ ಹರಿಜನ, ಪ್ರಶಾಂತ ದೊಡಮನಿ ಇದ್ದರು.

